ಬೆಂಗಳೂರು: ಪ್ರಕರಣವೊಂದರಲ್ಲಿ ಸಚಿವ ಕೆ.ಎಚ್. ಮುನಿಯಪ್ಪಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಜಾಮೀನು ನೀಡಿ ಆದೇಶ ಹೊರಡಿಸಲಾಗಿದೆ. 2013ರಲ್ಲಿ ಕೆಜಿಎಫ್ ಗಲಾಟೆಗೆ ಸಂಬಂಧಿಸಿದಂತೆ ಇಂದು ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಹಾಜರಾಗಬೇಕಿತ್ತು. ಸಂಜೆ ಒಳಗೆ ಕೋರ್ಟ್ ಗೆ ಹಾಜರಾಗದಿದ್ದರೆ ಬಂಧನ ವಾರೆಂಟ್ ಹೊರಡಿಸುವುದಾಗಿ ನ್ಯಾಯಮೂರ್ತಿಗಳು ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಮುನಿಯಪ್ಪ ಕೋರ್ಟ್ ಗೆ ಹಾಜರಾಗಿದ್ದರು. ಈ ವೇಳೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
2013ರ ವಿಧಾನಸಭಾ ಚುನಾವಣೆಯಲ್ಲಿ ಕೆಜಿಎಫ್ ನ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದ ವಿ.ಶಂಕರ್ ಮೇಲೆ ಅಂದಿನ ಸಂಸದ ಮುನಿಯಪ್ಪ ಹಾಗೂ ಬೆಂಬಲಿಗರು ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿತ್ತು. ಈ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಚಿವ ಕೆ.ಎಚ್. ಮುನಿಯಪ್ಪ ಹಾಜರಾಗಬೇಕಿತ್ತು.
ನ್ಯಾಯಮೂರ್ತಿ ಗಜಾನನ ಭಟ್ ಮುಂದೆ ಇಂದು ಹಾಜರಾಗಬೇಕಿದ್ದ ಸಚಿವ ಮುನಿಯಪ್ಪ ಹಾಜರಾಗದೆ ಗೈರಾದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳು ಅಸಮಧಾನ ಹೊರ ಹಾಕಿದ್ದರು. ಇಂದಿನ ಕೋರ್ಟ್ ಅವಧಿ ಮುಗಿಯುವುದರೊಳಗೆ ನ್ಯಾಯಾಲಯಕ್ಕೆ ಹಾಜರಾಗದಿದ್ದರೆ ಸಚಿವರನ್ನು ಬಂಧಿಸಿ ಕರೆ ತರಲು ಆದೇಶ ಹೊರಡಿಸುವುದಾಗಿ ಮುನಿಯಪ್ಪ ಪರ ವಕೀಲರಿಗೆ ತಿಳಿಸಿದ್ದರು. ಮುನಿಯಪ್ಪ ಕೋರ್ಟ್ ಗೆ ಹಾಜರಾಗಿದ್ದು, 50 ಸಾವಿರ ಪರ್ಸನಲ್ ಬಾಂಡ್ ಬರೆಸಿಕೊಂಡು ಜಾಮೀನು ನೀಡಲಾಯಿತು. ಪ್ರಕರಣದ ಎ1 ಆರೋಪಿಗೂ ಜಾಮೀನು ಮಂಜೂರು ಮಾಡಲಾಯಿತು.