ವಾಷಿಂಗ್ಟನ್: ಅಮೆರಿಕ(US News) ಉಪಾಧ್ಯಕ್ಷ ಜೆಡಿ ವ್ಯಾನ್ಸ್(JD Vance) ಮತ್ತು ಅವರ ಪತ್ನಿ ಉಷಾ ವ್ಯಾನ್ಸ್(Usha Vance) ಇದೇ ತಿಂಗಳ ಅಂತ್ಯದಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಫೆಬ್ರವರಿಯಲ್ಲಿ ಫ್ರಾನ್ಸ್ ಮತ್ತು ಜರ್ಮನಿಗೆ ಭೇಟಿ ನೀಡಿದ್ದ ವ್ಯಾನ್ಸ್ ಅವರು ಉಪಾಧ್ಯಕ್ಷರಾಗಿ ಕೈಗೊಳ್ಳುತ್ತಿರುವ ಎರಡನೇ ಅಂತಾರಾಷ್ಟ್ರೀಯ ಪ್ರವಾಸ ಇದಾಗಿರಲಿದೆ.
ಅಮೆರಿಕದ ದ್ವಿತೀಯ ಮಹಿಳೆಯಾಗಿ ಉಷಾ ವ್ಯಾನ್ಸ್ ಅವರು ತಮ್ಮ ತಾಯ್ನಾಡಿಗೆ ನೀಡುತ್ತಿರುವ ಮೊದಲ ಭೇಟಿಯೂ ಇದಾಗಿದೆ. ಉಷಾ ಅವರು ಭಾರತ ಮೂಲದವರಾಗಿದ್ದು, ಹಲವು ವರ್ಷಗಳ ಹಿಂದೆ ಅವರ ಪೋಷಕರು ಭಾರತದಿಂದ ಅಮೆರಿಕಕ್ಕೆ ವಲಸೆ ಹೋಗಿದ್ದರು.
ಸುಂಕ ಕಡಿತಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಅಮೆರಿಕದ ನಡುವೆ ಉದ್ವಿಗ್ನತೆಯು ಹೆಚ್ಚುತ್ತಿರುವ ನಡುವೆಯೇ ವ್ಯಾನ್ಸ್ ದಂಪತಿ ಭಾರತಕ್ಕೆ ಭೇಟಿ ನೀಡುತ್ತಿರುವುದು ಮಹತ್ವ ಪಡೆದಿದೆ
ಜನವರಿ 21, 2025 ರಂದು ಜೆಡಿ ವ್ಯಾನ್ಸ್ ಅಮೆರಿಕದ 50 ನೇ ಉಪಾಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಅಮೆರಿಕದ ದ್ವಿತೀಯ ಮಹಿಳೆಯೆಂಬ ಹೆಗ್ಗಳಿಕೆಗೆ ಪಾತ್ರರಾದ ಮೊದಲ ಭಾರತೀಯ-ಅಮೆರಿಕನ್ ಹಿಂದೂ ಎಂಬ ಖ್ಯಾತಿಯನ್ನು ಉಷಾ ಅವರು ಹೊಂದಿದ್ದಾರೆ.
ಇದಕ್ಕೂ ಮುನ್ನ ಫೆಬ್ರವರಿಯಲ್ಲಿ ಪ್ಯಾರಿಸ್‌ನಲ್ಲಿ ನಡೆದ ಸಭೆಯಲ್ಲಿ, ಜೆಡಿ ವ್ಯಾನ್ಸ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಇಂಧನ ವೈವಿಧ್ಯೀಕರಣಕ್ಕೆ ಅಮೆರಿಕ ಬೆಂಬಲ ಸೇರಿದಂತೆ ಪರಸ್ಪರ ಹಿತಾಸಕ್ತಿಗಳ ಬಗ್ಗೆ ಚರ್ಚಿಸಿದ್ದರು. ಸಭೆಯ ನಂತರ ಪ್ರಧಾನಿ ನರೇಂದ್ರ ಮೋದಿ, ಜೆಡಿ ವ್ಯಾನ್ಸ್ ಮತ್ತು ಅವರ ಪತ್ನಿ ಉಷಾ ವ್ಯಾನ್ಸ್ ಜತೆಯಾಗಿ ಕಾಫಿ ಸೇವಿಸಿದ್ದರು. ಮೋದಿ ಅವರು ವ್ಯಾನ್ಸ್ ಮಕ್ಕಳಿಗೆ ಉಡುಗೊರೆಗಳನ್ನೂ ನೀಡಿದ್ದರು.
ಇತ್ತೀಚಿನ ವರ್ಷಗಳಲ್ಲಿ, ವಿಶೇಷವಾಗಿ ವ್ಯಾಪಾರ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಅಮೆರಿಕ-ಭಾರತ ಪಾಲುದಾರಿಕೆ ಬಲವಾಗಿದೆ. ಜಾಗತಿಕ ಸವಾಲುಗಳು ವಿಕಸನಗೊಳ್ಳುತ್ತಿದ್ದಂತೆ, ಎರಡೂ ದೇಶಗಳು ಭದ್ರತೆಯಿಂದ ತಂತ್ರಜ್ಞಾನದವರೆಗೆ ಪ್ರಮುಖ ವಿಷಯಗಳ ಬಗ್ಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿವೆ. ಉಷಾ ವ್ಯಾನ್ಸ್ ಅವರ ಭಾರತೀಯ ಮೂಲವನ್ನು ಗಮನದಲ್ಲಿಟ್ಟುಕೊಂಡರೆ, ವ್ಯಾನ್ಸ್ ಅವರ ಭಾರತ ಭೇಟಿಯು ರಾಜತಾಂತ್ರಿಕ ಮತ್ತು ವೈಯಕ್ತಿಕ ಮಹತ್ವವನ್ನು ಹೊಂದಿದೆ.