ಬಲೂಚಿಸ್ತಾನ…. ಪಾಕಿಸ್ತಾನದ ನಾಲ್ಕು ಪ್ರಾಂತ್ಯಗಳಲ್ಲಿ ಅತಿ ದೊಡ್ಡದಾದ ಮತ್ತು ಅತ್ಯಂತ ವಿರಳ ಜನಸಂಖ್ಯೆಯನ್ನು ಹೊಂದಿರುವ ಪ್ರದೇಶ. ಆದರೆ, ಇಲ್ಲಿ ಶಾಂತಿ ಮತ್ತು ಅಭಿವೃದ್ಧಿ ಮಾತ್ರ ಇಂದಿಗೂ ಮರೀಚಿಕೆ. ಇಲ್ಲಿನ ಜನರು ಪಾಕಿಸ್ತಾನ ಸರ್ಕಾರದ ವಿರುದ್ಧ ಸ್ವಾತಂತ್ರ್ಯಗೊಂಡಾಗಿನಿಂದಲೂ ದ್ವೇಷ ಹೊಂದಿದ್ದು, ಬಲೂಚಿಸ್ತಾನವನ್ನು ಪ್ರತ್ಯೇಕ ರಾಷ್ಟ್ರವೆಂದು ಘೋಷಿಸಬೇಕು ಎಂದು ಆಗ್ರಹಿಸುತ್ತಲೇ ಇದ್ದಾರೆ. ಪ್ರತ್ಯೇಕ ರಾಷ್ಟ್ರದ ಈ ಕೂಗಿಗೆ ಹಿಂಸಾತ್ಮಕ ದಾರಿಯ ಮೂಲಕ ಪರಿಹಾರ ಕಂಡುಕೊಳ್ಳಲು ಹೊರಟವರೇ ಬಲೂಚ್ ಬಂಡುಕೋರರು. ಪಾಕಿಸ್ತಾನದ ಸ್ಥಾಪಕ ಮತ್ತು ಪಿತಾಮಹ ಮುಹಮ್ಮದ್ ಅಲಿ ಜಿನ್ನಾ ಅವರು ಬಲೂಚ್ ಜನರಿಗೆ ಮಾಡಿದ್ದಾರೆ ಎನ್ನಲಾದ ದ್ರೋಹವೇ ಈ ಬಂಡುಕೋರರ ಬಂಡವಾಳ.
ಇದೇ ಮಾರ್ಚ್ 11ರ ಮಂಗಳವಾರ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ(ಬಿಎಲ್ಎ)ಯ ಬಂಡುಕೋರರು ಪಾಕಿಸ್ತಾನದ ಕ್ವೆಟ್ಟಾದಿಂದ ಪೇಶಾವರಕ್ಕೆ ಹೋಗುತ್ತಿದ್ದ ರೈಲನ್ನು ಹೈಜಾಕ್ ಮಾಡಿದ್ದಾರೆ. ಪಾಕ್ ಸೈನಿಕರೂ ಸೇರಿದಂತೆ 400ಕ್ಕೂ ಹೆಚ್ಚು ಪ್ರಯಾಣಿಕರನ್ನು ಒತ್ತೆಯಲ್ಲಿಟ್ಟುಕೊಂಡಿದ್ದಾರೆ. ಈ ಪೈಕಿ 20ಕ್ಕೂ ಹೆಚ್ಚು ಸೈನಿಕರನ್ನು ಹತ್ಯೆಗೈದಿದ್ದಾರೆ. ತಮ್ಮ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸಿದ್ದೇ ಆದಲ್ಲಿ, ಎಲ್ಲ ಒತ್ತೆಯಾಳುಗಳನ್ನೂ ಕೊಲ್ಲುವುದಾಗಿ ಪಾಕ್ ಸರ್ಕಾರಕ್ಕೆ ಬೆದರಿಕೆಯೊಡ್ಡಿದ್ದಾರೆ. ಈ ಘಟನೆಯು ಈಗಾಗಲೇ ಆರ್ಥಿಕವಾಗಿ ದಿವಾಳಿ ಹಂತಕ್ಕೆ ತಲುಪಿರುವ ಪಾಕ್‌ಗೆ ಹೊಸ ತಲೆನೋವು ತಂದಿಕ್ಕಿದೆ. ಭಾರತ ಸೇರಿದಂತೆ ಬೇರೆ ದೇಶಗಳ ನೆಲದಲ್ಲಿ ಉಗ್ರವಾದದ ವಿಷಬೀಜ ಬಿತ್ತಿರುವ ಪಾಕಿಸ್ತಾನಕ್ಕೆ 1948ರಿಂದಲೂ ಸಿಂಹಸ್ವಪ್ನವಾಗಿರುವ ಈ ಬಲೂಚ್ ಬಂಡುಕೋರರು ಯಾರು, ಅವರ ಉದ್ದೇಶವೇನು ಎಂಬ ಮಾಹಿತಿ ಇಲ್ಲಿದೆ.
1948ರಿಂದಲೂ ಬಲೂಚ್ ರಾಷ್ಟ್ರೀಯವಾದಿಗಳು ಪಾಕಿಸ್ತಾನ ಸರ್ಕಾರದ ವಿರುದ್ಧ ನಿರಂತರವಾಗಿ ಸಶಸ್ತ್ರ ಹೋರಾಟ ನಡೆಸುತ್ತಲೇ ಇದ್ದಾರೆ. ಬಲೂಚಿಸ್ತಾನವು 1958-59, 1962-63, 1973-77ರಲ್ಲಿ ಹಿಂಸಾತ್ಮಕ ಸ್ವಾತಂತ್ರ್ಯ ಚಳವಳಿಯ ಘಟನೆಗಳಿಗೆ ಸಾಕ್ಷಿಯಾಗಿದೆ. 2003ರಿಂದ ಇದು ಮತ್ತೊಂದು ಮಜಲು ಮುಟ್ಟಿದೆ ಎನ್ನಬಹುದು.
ಬಲೂಚಿಸ್ತಾನವು ಶುಷ್ಕ ಆದರೆ ಖನಿಜ ಸಮೃದ್ಧ ಪ್ರಾಂತ್ಯ. ಹೀಗಿದ್ದರೂ ಇಲ್ಲಿನ ಜನರು ಐತಿಹಾಸಿಕವಾಗಿ ಪಾಕಿಸ್ತಾನದ ಪಂಜಾಬ್ ಪ್ರಾಬಲ್ಯದ ರಾಜಕೀಯದಿಂದ ನಿರ್ಲಕ್ಷಿಸಲ್ಪಟ್ಟಿದ್ದಾರೆ. ಇಲ್ಲಿನ ನೆಲದ ಖನಿಜ ಸಂಪತ್ತನ್ನು ಹೊರತೆಗೆದು, ಪಾಕಿಸ್ತಾನ ಸರ್ಕಾರ ತನ್ನ ಬೊಕ್ಕಸ ತುಂಬಿಸಿಕೊಳ್ಳುತ್ತಿದೆ. ಆದರೆ, ಬಲೂಚ್ ಜನರು ಮಾತ್ರ ಆರ್ಥಿಕವಾಗಿ ತುಳಿತಕ್ಕೊಳಗಾಗುತ್ತಲೇ ಇದ್ದಾರೆ.

ಇನ್ನೊಂದೆಡೆ, ಚೀನಾದ ನೆರವಿನೊಂದಿಗೆ ಪಾಕಿಸ್ತಾನ ಅಭಿವೃದ್ಧಿಪಡಿಸುತ್ತಿರುವ ಗ್ವಾದರ್ ಬಂದರು ಕೂಡ ಬಲೂಚ್ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಚೀನಾದ ಎಂಜಿನಿಯರ್‌ಗಳ ಮೇಲೆ ಹಲವು ಬಾರಿ ಬಲೂಚ್ ಉಗ್ರಗಾಮಿ ಗುಂಪುಗಳು ನಡೆಸಿರುವ ದಾಳಿಯೇ ಇದಕ್ಕೆ ಸಾಕ್ಷಿ. ಗ್ವಾದರ್ ಬಂದರು ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ)ನ ಒಂದು ಭಾಗವಾಗಿದೆ.
ಹೀಗಿದ್ದರೂ, ಬಲೂಚ್ ರಾಷ್ಟ್ರೀಯತಾವಾದಿ ಚಳವಳಿಯ ನಾಯಕತ್ವವು ಛಿದ್ರವಾಗಿರುವ ಕಾರಣ, ಏಕೀಕೃತ ಗುರಿಯೊಂದಿಗೆ ಅಥವಾ ತಂತ್ರದೊಂದಿಗೆ ಸಾಗಲು ಬಂಡುಕೋರರಿಗೆ ಸಾಧ್ಯವಾಗುತ್ತಿಲ್ಲ ಎಂದೂ ಹೇಳಲಾಗುತ್ತಿದೆ.
ಇಲ್ಲಿ ಇತ್ತೀಚಿನ ಸಶಸ್ತ್ರ ದಂಗೆ ಆರಂಭವಾಗಿದ್ದು 2004 ರಲ್ಲಿ. 2006 ರಲ್ಲಿ ಪಾಕಿಸ್ತಾನಿ ಪಡೆಗಳು ಪ್ರಭಾವಿ ಬಲೂಚ್ ಬುಡಕಟ್ಟು ನಾಯಕ ಅಕ್ಬರ್ ಖಾನ್ ಬುಗ್ತಿಯನ್ನು ಹತ್ಯೆಗೈದವು. ಅದಾದ ನಂತರ ಬಲೂಚ್ ಹೋರಾಟಕ್ಕೆ ವೇಗ ದೊರೆಯಿತು. ಬಲೂಚ್ ಜನರಿಗೆ ಹೆಚ್ಚಿನ ಸ್ವಾಯತ್ತತೆ, ಸಂಪನ್ಮೂಲ ನಿಯಂತ್ರಣ ಮತ್ತು ಬಲೂಚಿಸ್ತಾನದ ನೈಸರ್ಗಿಕ ಅನಿಲ ಆದಾಯದಲ್ಲಿ ನ್ಯಾಯಯುತ ಪಾಲು ಸಿಗಬೇಕು ಎಂದು ಬುಗ್ತಿ ಹೋರಾಡುತ್ತಿದ್ದರು. ಅವರ ಹತ್ಯೆಯು ಬಲೂಚಿಸ್ತಾನದ ಜನತೆಯಲ್ಲಿ ಆಕ್ರೋಶದ ಕಟ್ಟೆಯೊಡೆಯುವಂತೆ ಮಾಡಿತು. ಬಲೂಚ್ ಉಗ್ರಗಾಮಿತ್ವದ ರಕ್ತಸಿಕ್ತ ಅಧ್ಯಾಯಕ್ಕೆ ಈ ಘಟನೆ ಹೊಸ ತಿರುವನ್ನು ತಂದುಕೊಟ್ಟಿತು.
ಬಾಂಗ್ಲಾದೇಶ ಸಂಪರ್ಕ ಮತ್ತು ಬಲೂಚ್ ಚಳುವಳಿ
1971ರಲ್ಲಿ ಪಾಕಿಸ್ತಾನದಿಂದ ಬಾಂಗ್ಲಾದೇಶ (ಪೂರ್ವ ಪಾಕಿಸ್ತಾನ) ವಿಮೋಚನೆಗೊಂಡಿದ್ದೇ ತಡ, ನಮಗೂ ಸ್ವಾಯತ್ತತೆ ನೀಡಿ ಎಂಬ ಬೇಡಿಕೆಯನ್ನು ಬಲೂಚಿಸ್ತಾನದ ರಾಷ್ಟ್ರೀಯ ಅವಾಮಿ ಪಕ್ಷದ ನಾಯಕರು ಇಡಲಾರಂಭಿಸಿದರು. ಅಂದಿನ ಪಾಕ್ ಪ್ರಧಾನಿ ಜುಲ್ಫಿಕರ್ ಅಲಿ ಭುಟ್ಟೋ ಈ ಬೇಡಿಕೆಗಳನ್ನು ತಿರಸ್ಕರಿಸಿದ್ದರಿಂದ ಪ್ರತಿಭಟನೆಗಳು ಹೆಚ್ಚಾದವು.
1973ರಲ್ಲಿ ಭುಟ್ಟೋ ಅವರು ಅಕ್ಬರ್ ಖಾನ್ ಬುಗ್ತಿ ಅವರ ಬಲೂಚಿಸ್ತಾನ ಪ್ರಾಂತೀಯ ಸರ್ಕಾರವನ್ನು ವಜಾಗೊಳಿಸಿದರು. ಬಲೂಚ್ ಬಂಡುಕೋರರಿಗೆ ನೀಡಲೆಂದು ಇರಾಕ್ ರಾಯಭಾರ ಕಚೇರಿಯಲ್ಲಿ ಭಾರೀ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಡಲಾಗಿದೆ ಎಂದು ಘೋಷಿಸಿ, ಏಕಾಏಕಿ ದೊಡ್ಡ ಪ್ರಮಾಣದ ಮಿಲಿಟರಿ ಕಾರ್ಯಾಚರಣೆಯನ್ನು ಘೋಷಿಸಿದರು.
ಇದು ಪೂರ್ಣ ಪ್ರಮಾಣದ ಸಶಸ್ತ್ರ ದಂಗೆಗೆ ಕಾರಣವಾಯಿತು. ಈ ದಂಗೆ 1977ರವರೆಗೆ ಅಂದರೆ ಸತತ ನಾಲ್ಕು ವರ್ಷಗಳ ಕಾಲ ನಡೆಯಿತು. ಇದನ್ನು ನಾಲ್ಕನೇ ಬಲೂಚಿಸ್ತಾನ ಸಂಘರ್ಷ ಎಂದೂ ಕರೆಯಲಾಗುತ್ತದೆ.
ವರದಿಗಳ ಪ್ರಕಾರ, ಮರಿ, ಮೆಂಗಲ್ ಮತ್ತು ಬುಗ್ತಿ ಬುಡಕಟ್ಟು ಮುಖ್ಯಸ್ಥರ ನೇತೃತ್ವದಲ್ಲಿ ಸುಮಾರು 55,000 ಬಲೂಚ್ ಬುಡಕಟ್ಟು ಜನಾಂಗದವರು 80,000 ಪಾಕಿಸ್ತಾನಿ ಮಿಲಿಟರಿ ಸಿಬ್ಬಂದಿಯ ವಿರುದ್ಧ ಹೋರಾಡಿದರು. ಇನ್ನೊಂದೆಡೆ ಪಾಕಿಸ್ತಾನ ವಾಯುಪಡೆಯು ಬಲೂಚಿಸ್ತಾನದ ಹಳ್ಳಿಗಳ ಮೇಲೆ ಬಾಂಬ್ ದಾಳಿ ನಡೆಸಿ ಸಾವಿರಾರು ಬಲೂಚ್ ನಾಗರಿಕರನ್ನು ಕೊಂದು ಹಾಕಿತು. ಈ ವೇಳೆ ಇರಾನ್ ಕೂಡ ಪಾಕಿಸ್ತಾನಕ್ಕೆ ಸೇನಾ ನೆರವನ್ನು ನೀಡಿತು.
1977ರಲ್ಲಿ ಜನರಲ್ ಜಿಯಾ-ಉಲ್-ಹಕ್ ಮಿಲಿಟರಿ ಕ್ಷಿಪ್ರ ಕ್ರಾಂತಿ ನಡೆಸಿ ಭುಟ್ಟೋ ಅವರನ್ನು ಪದಚ್ಯುತಗೊಳಿಸಿದರು. ಬುಡಕಟ್ಟು ಜನರಿಗೆ ಕ್ಷಮಾದಾನ ನೀಡಲಾಯಿತು. ಬಲೂಚಿಸ್ತಾನದಿಂದ ಸೇನೆಯನ್ನು ಹಿಂಪಡೆದುಕೊಳ್ಳಲಾಯಿತು. ಇದಾದ ನಂತರ ಸಶಸ್ತ್ರ ಹೋರಾಟ ಕೊನೆಗೊಂಡಿತು.
ಎರಡನೇ ಮತ್ತು ಮೂರನೇ ಬಲೂಚಿಸ್ತಾನ ಸಂಘರ್ಷ
1954ರಲ್ಲಿ, ಪಾಕಿಸ್ತಾನವು ಒನ್ ಯುನಿಟ್ ಎಂಬ ಯೋಜನೆಯನ್ನು ಪ್ರಾರಂಭಿಸಿತು. ಅದರ ಮೂಲಕ ತನ್ನ ಪ್ರಾಂತ್ಯಗಳನ್ನು ಮರುಸಂಘಟಿಸಲು ಆರಂಭಿಸಿತು. ಬಲೂಚಿಸ್ತಾನವನ್ನು ಇತರ ಪ್ರಾಂತ್ಯಗಳೊಂದಿಗೆ ಈ ಯೋಜನೆಯಡಿ ವಿಲೀನಗೊಳಿಸಿದ್ದರಿಂದ ಅದರ ಸ್ವಾಯತ್ತತೆ ಮತ್ತಷ್ಟು ಕಡಿಮೆಯಾಯಿತು.
ಇದು ಬಲೂಚ್ ನಾಯಕರಲ್ಲಿ ಭಾರೀ ಆಕ್ರೋಶ ಹುಟ್ಟುಹಾಕಿತು. ಕಲಾತ್‌ನ ಖಾನ್ ನವಾಬ್ ನೌರೋಜ್ ಖಾನ್ 1958 ರಲ್ಲಿ ಬಲೂಚ್‌ಗೆ ಸ್ವಾತಂತ್ರ್ಯವನ್ನು ಘೋಷಿ, ಪಾಕಿಸ್ತಾನಿ ಪಡೆಗಳ ವಿರುದ್ಧ ಗೆರಿಲ್ಲಾ ಯುದ್ಧವನ್ನು ಪ್ರಾರಂಭಿಸಿದರು.
ಆದಾಗ್ಯೂ, 1959ರಲ್ಲಿ, ಪಾಕಿಸ್ತಾನವು ನೌರೋಜ್ ಖಾನ್ ಅವರನ್ನು ದಯಾಪರತೆಯ ಭರವಸೆ ನೀಡಿ ಶರಣಾಗುವಂತೆ ಮನವೊಲಿಸಿ ಮೋಸ ಮಾಡಿತು. ಅವರು ಶರಣಾಗುತ್ತಿದ್ದಂತೆ, ಕ್ಷಮಾದಾನ ನೀಡುವ ಬದಲಾಗಿ, ನೌರೋಜ್ ಮತ್ತು ಅವನ ಮಕ್ಕಳನ್ನು ಬಂಧಿಸಲಾಯಿತು. ಅವರ ಐದು ಸಂಬಂಧಿಕರನ್ನು ಗಲ್ಲಿಗೇರಿಸಲಾಯಿತು. ಪಾಕಿಸ್ತಾನ ಸರ್ಕಾರ ಮಾಡಿದ ಈ ದ್ರೋಹದ ಬಲೂಚ್ ಜನರಲ್ಲಿ ಮಡುಗಟ್ಟಿದ್ದ ಆಕ್ರೋಶದ ಬೆಂಕಿಗೆ ತುಪ್ಪ ಸುರಿಯಿತು. ಪರಿಣಾಮ ಪ್ರಕ್ಷುಬ್ಧ ಪ್ರಾಂತ್ಯವು 1963 ರಲ್ಲಿ ಮೂರನೇ ಬಲೂಚಿಸ್ತಾನ್ ಸಂಘರ್ಷವನ್ನು ಕಂಡಿತು.
ಬಲೂಚಿಸ್ತಾನದ ಅನಿಲ ನಿಕ್ಷೇಪಗಳಿಂದ ಬರುವ ಆದಾಯವನ್ನು ನಮ್ಮೊಂದಿಗೆ ಹಂಚಿಕೊಳ್ಳಬೇಕು ಎಂದು ಪಾಕ್ ಸರ್ಕಾರವನ್ನು ಒತ್ತಾಯಿಸುವುದು, ಒನ್ ಯುನಿಟ್ ಯೋಜನೆಯನ್ನು ವಿಸರ್ಜಿಸುವುದು ಮತ್ತು ಬಲೂಚ್ ಬಂಡುಕೋರರನ್ನು ಬಿಡುಗಡೆ ಮಾಡುವ ಗುರಿಯೊಂದಿಗೆ ಶೇರ್ ಮುಹಮ್ಮದ್ ಬಿಜ್ರಾನಿ ಮರ್ರಿ ನೇತೃತ್ವದಲ್ಲಿ ಮತ್ತೆ ಬಂಡಾಯ ಆರಂಭವಾಯಿತು.
1969 ರಲ್ಲಿ ಸಾಮಾನ್ಯ ಕ್ಷಮಾದಾನ ಮತ್ತು ಬಲೂಚ್ ಪ್ರತ್ಯೇಕತಾವಾದಿಗಳ ಬಿಡುಗಡೆಯೊಂದಿಗೆ ಈ ಬಂಡಾಯ ಕೊನೆಗೊಂಡಿತು. 1970 ರಲ್ಲಿ, ಒನ್ ಯುನಿಟ್ ನೀತಿಯನ್ನು ರದ್ದುಗೊಳಿಸಿದ ನಂತರ ಬಲೂಚಿಸ್ತಾನವನ್ನು ನಾಲ್ಕು ಪ್ರಾಂತ್ಯಗಳಲ್ಲಿ ಒಂದು ಎಂದು ಗುರುತಿಸಲಾಯಿತು.
ಬಲೂಚಿಸ್ತಾನ ಪಾಕ್ ನೊಂದಿಗೆ ವಿಲೀನ ಆಗಿದ್ದು ಹೇಗೆ?
1947ರಲ್ಲಿ ಭಾರತ- ಪಾಕಿಸ್ತಾನ ವಿಭಜನೆಗೊಂಡ ಸಮಯದಲ್ಲಿ ಬಲೂಚಿಸ್ತಾನ ಪ್ರದೇಶವು ಕಲಾತ್, ಖರಾನ್, ಲಾಸ್ ಬೇಲಾ ಮತ್ತು ಮಕರನ್ ಎಂಬ ನಾಲ್ಕು ರಾಜಪ್ರಭುತ್ವದ ರಾಜ್ಯಗಳಾಗಿ ಅಸ್ತಿತ್ವದಲ್ಲಿತ್ತು. ಅವರಿಗೆ ಭಾರತಕ್ಕೆ ಸೇರುವ, ಪಾಕಿಸ್ತಾನದೊಂದಿಗೆ ವಿಲೀನಗೊಳ್ಳುವ ಅಥವಾ ತಮ್ಮ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳುವ ಆಯ್ಕೆ ಇತ್ತು. ಮುಹಮ್ಮದ್ ಅಲಿ ಜಿನ್ನಾ ಪ್ರಭಾವದಿಂದ ಮೂರು ರಾಜ್ಯಗಳು ಪಾಕಿಸ್ತಾನದೊಂದಿಗೆ ವಿಲೀನಗೊಂಡವು.
ಆದಾಗ್ಯೂ, ಕಲಾತ್ ನ ಖಾನ್ ಎಂದೂ ಕರೆಯಲ್ಪಡುವ ಖಾನ್ ಮೀರ್ ಅಹ್ಮದ್ ಯಾರ್ ಖಾನ್ ಅವರ ಅಡಿಯಲ್ಲಿ ಕಲಾತ್ ಸ್ವಾತಂತ್ರ್ಯವನ್ನು ಆರಿಸಿಕೊಂಡಿತು. ಕಲಾತ್ ಖಾನ್ 1946 ರಲ್ಲಿ ಮುಹಮ್ಮದ್ ಅಲಿ ಜಿನ್ನಾ ಅವರನ್ನು ಬ್ರಿಟಿಷ್ ಪ್ರಭುತ್ವದ ಮುಂದೆ ತಮ್ಮ ಪ್ರಕರಣವನ್ನು ಪ್ರತಿನಿಧಿಸಲು ತಮ್ಮ ಕಾನೂನು ಸಲಹೆಗಾರರಾಗಿ ನೇಮಿಸಿದ್ದರು.
1947ರ ಆಗಸ್ಟ್ 4ರಂದು ದೆಹಲಿಯಲ್ಲಿ ನಡೆದ ಸಭೆಯಲ್ಲಿ ಕಲಾತ್ ನ ಖಾನ್ ಹಾಗೂ ಲಾರ್ಡ್ ಮೌಂಟ್ ಬ್ಯಾಟನ್ ಮತ್ತು ಜವಾಹರಲಾಲ್ ನೆಹರೂ ಭಾಗವಹಿಸಿದ್ದರು. ಜಿನ್ನಾ ಅವರ ಒತ್ತಾಯದ ಮೇರೆಗೆ, ಖರಾನ್ ಮತ್ತು ಲಾಸ್ ಬೇಲಾವನ್ನು ಕಲಾತ್ ನೊಂದಿಗೆ ವಿಲೀನಗೊಳಿಸಿ ಸಂಪೂರ್ಣ ಬಲೂಚಿಸ್ತಾನವನ್ನು ರಚಿಸಲಾಯಿತು.
ಅದರಂತೆ ಆಗಸ್ಟ್ 15, 1947 ರಂದು ಕಲಾತ್‌ಗೆ ಸ್ವಾತಂತ್ರ್ಯ ಸಿಕ್ಕಿತು. ಸ್ವತಂತ್ರ ಸಾರ್ವಭೌಮ ರಾಷ್ಟ್ರವಾಗಿದ್ದರೂ, ಕಲಾತ್ ಸ್ವತಂತ್ರ ದೇಶದ ಅಂತರಾಷ್ಟ್ರೀಯ ಜವಾಬ್ದಾರಿಗಳನ್ನು ಪೂರೈಸಿಲ್ಲ ಎಂದು ಸೆಪ್ಟೆಂಬರ್ 12ರ ಬ್ರಿಟಿಷ್ ಜ್ಞಾಪಕ ಪತ್ರದಲ್ಲಿ ಆರೋಪಿಸಲಾಯಿತು. ಇದರ ಬೆನ್ನಲ್ಲೇ 1947ರ ಅಕ್ಟೋಬರ್ ನಲ್ಲಿ ನಡೆದ ಸಭೆಯಲ್ಲಿ ಜಿನ್ನಾ ಅವರು ಕಲಾತ್ ಅನ್ನು ಪಾಕಿಸ್ತಾನದೊಂದಿಗೆ ವಿಲೀನಗೊಳಿಸಿ, ಜೊತೆಗೆ ಈ ಪ್ರಕ್ರಿಯೆ ತ್ವರಿತಗೊಳಿಸಿ ಎಂದು ಖಾನ್ ಅವರನ್ನು ಕೇಳಿಕೊಂಡರು. ಆದರೆ, ಇದಕ್ಕೆ ಖಾನ್ ಒಪ್ಪಲಿಲ್ಲ. ಅವರು ಈ ವಿಚಾರದಲ್ಲಿ ಬೆಂಬಲ ನೀಡುವಂತೆ ಭಾರತ ಸೇರಿದಂತೆ ಹಲವಾರು ಭಾಗಗಳಿಂದ ಕೋರಿದರು. ಯಾವ ದಿಕ್ಕಿನಿಂದಲೂ ಬೆಂಬಲ ವ್ಯಕ್ತವಾಗದ ಕಾರಣ ಕೊನೆಗೆ ಅವರು ಅನಿವಾರ್ಯವಾಗಿ ಎಲ್ಲದಕ್ಕೂ ಒಪ್ಪಬೇಕಾಯಿತು.
ಮಾರ್ಚ್ 26ರಂದು ಪಾಕಿಸ್ತಾನ ಸೇನೆಯು ಬಲೂಚ್ ಕರಾವಳಿ ಪ್ರದೇಶಕ್ಕೆ ಸ್ಥಳಾಂತರಗೊಂಡಿತು. ಜಿನ್ನಾ ಅವರ ಷರತ್ತುಗಳಿಗೆಲ್ಲ ಖಾನ್ ತಲೆದೂಗಬೇಕಾಯಿತು.
ಕಲಾತ್ ನ ಖಾನ್ ವಿಲೀನ ಪತ್ರಕ್ಕೆ ಸಹಿ ಹಾಕಿದರೂ, ಅವರ ಸಹೋದರ ರಾಜಕುಮಾರ ಅಬ್ದುಲ್ ಕರೀಮ್ 1948 ರಲ್ಲಿ ಪಾಕಿಸ್ತಾನದ ವಿರುದ್ಧ ಮೊದಲ ಸಶಸ್ತ್ರ ಬಂಡಾಯಕ್ಕೆ ಮುನ್ನುಡಿ ಬರೆದರು. ದಂಗೆಯನ್ನು ಕ್ಷಣಾರ್ಧದಲ್ಲಿ ನಿಗ್ರಹಿಸಲಾಯಿತು. ಆದರೆ, ಅಷ್ಟರಲ್ಲೇ ಅದು ಬಲೂಚ್ ರಾಷ್ಟ್ರೀಯತೆಯ ಬೀಜ ಮೊಳಕೆಯೊಡೆಯತೊಡಗಿತ್ತು.
ಹೀಗಾಗಿ, ಸುಮಾರು 226 ದಿನಗಳ ಸ್ವಾತಂತ್ರ್ಯವನ್ನು ಅನುಭವಿಸಿದ್ದ ಬಲೂಚಿಸ್ತಾನ, ಕೆಲವೇ ದಿನಗಳಲ್ಲಿ ಪಾಕಿಸ್ತಾನದೊಂದಿಗೆ ವಿಲೀನಗೊಂಡಿತು. ಇದು ಆಗಿದ್ದು ಜನರ ಇಚ್ಛೆಯಿಂದಲ್ಲ. ಜಿನ್ನಾ ಅವರ ದ್ರೋಹ ಮತ್ತು ಇಸ್ಲಾಮಾಬಾದ್‌ನ ಮಿಲಿಟರಿ ಶಕ್ತಿಯಿಂದ. 75 ವರ್ಷಗಳ ಹಿಂದಿನ ಈ ದ್ರೋಹ, ಜನರ ಶೋಷಣೆ ಬಲೂಚ್ ಜನರ ಸಶಸ್ತ್ರ ಪ್ರತಿರೋಧದ ಮೂಲವಾಗಿಯೇ ಉಳಿದಿದೆ.