ಬೆಂಗಳೂರು: ಭಾರತವು ಚಿನ್ನದ ಬಳಕೆಯಲ್ಲಿ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ. ಚಿನ್ನದ ಬೆಲೆ ಎಷ್ಟೇ ಏರಿಕೆಯಾಗಲಿ, ಜನ ಮಾತ್ರ ಚಿನ್ನ ಖರೀದಿಸುವುದನ್ನು ನಿಲ್ಲಿಸುವುದಿಲ್ಲ. ಮದುವೆ, ನಾಮಕರಣ, ನಿಶ್ಚಿತಾರ್ಥ ಸೇರಿ ಪ್ರಮುಖ ಸಂದರ್ಭಗಳಲ್ಲಂತೂ ಚಿನ್ನ ಬೇಕೇಬೇಕು. ಅಷ್ಟರಮಟ್ಟಿಗೆ ಭಾರತೀಯರಿಗೆ, ಚಿನ್ನವು ಆಭರಣವಾಗಿರುವ ಜತೆಗೆ ಭಾವನಾತ್ಮಕವಾಗಿಯೂ ಬೆಸೆದುಕೊಂಡಿದೆ. ಹಾಗಂತ, ಚಿನ್ನವನ್ನು ಮನೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇಟ್ಟುಕೊಳ್ಳುವಂತಿಲ್ಲ. ತೆರಿಗೆ, ಸುರಕ್ಷತೆ ದೃಷ್ಟಿಯಿಂದ ಒಂದು ಮನೆಯಲ್ಲಿ ಇಷ್ಟೇ ಗ್ರಾಂ ಚಿನ್ನ ಇಟ್ಟುಕೊಳ್ಳಬೇಕು ಎಂಬ ನಿಯಮವಿದೆ. ಆ ನಿಯಮ ಏನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಎಷ್ಟು ಗ್ರಾಂ ಸಂಗ್ರಹ ಸಾಧ್ಯ?
ಮನೆಯಲ್ಲಿ ದಾಖಲೆ ಇಲ್ಲದೆ ವಿವಾಹಿತ ಮಹಿಳೆಯರು 500 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ಹೊಂದಬಹುದು. ಅವಿವಾಹಿತ ಮಹಿಳೆ 250 ಗ್ರಾಂ ಚಿನ್ನಾಭರಣ ಹೊಂದಬಹುದು. ಅವಿವಾಹಿತ ವ್ಯಕ್ತಿ 100 ಗ್ರಾಂ ಚಿನ್ನವನ್ನು ಹೊಂದಬಹುದು. ಕುಟುಂಬದಲ್ಲಿ ಇಬ್ಬರು ವಿವಾಹಿತ ಮಹಿಳೆಯರಿದ್ದರೆ, ಒಟ್ಟು ಮಿತಿಯು 500 ಗ್ರಾಂನಿಂದ ಒಂದು ಕೆಜಿಯವರೆಗೆ ಹೆಚ್ಚಾಗುತ್ತದೆ.
ಈ ನಿಯಮಗಳು ಕುಟುಂಬದ ಆಭರಣಗಳು ಅಥವಾ ಇತರ ಆಭರಣಗಳಿಗೆ ಮಾತ್ರ ಅನ್ವಯಿಸುತ್ತವೆ. ಆದರೆ, ಆದಾಯದ ಮೂಲವಿಲ್ಲದೆ ಹೆಚ್ಚು ಚಿನ್ನ ಸಿಕ್ಕರೆ ಕ್ರಮ ಕೈಗೊಳ್ಳಲಾಗುವುದು. ತೆರಿಗೆ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಳ್ಳಬಹುದು. ಹಾಗಾಗಿ, ಚಿನ್ನ ಸಂಗ್ರಹದ ಕುರಿತು ನಿಯಮಗಳನ್ನು ತಿಳಿದುಕೊಂಡಿರುವುದು ಒಳ್ಳೆಯದು.
ನಿಯಮಗಳು ಏನು ಹೇಳುತ್ತವೆ?
ಮನೆಯಲ್ಲಿ ಎಷ್ಟು ಗ್ರಾಂ ಚಿನ್ನವನ್ನು ಸಂಗ್ರಹಿಸಿ ಇಟ್ಟುಕೊಳ್ಳಬೇಕು ಎಂಬ ಕುರಿತಂತೆ ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯು (ಸಿಬಿಡಿಟಿ) 1994ರಲ್ಲಿ ನಿಯಮಗಳನ್ನು ರೂಪಿಸಿದೆ. ಈ ನಿಯಮಗಳ ಪ್ರಕಾರ, ಕೃಷಿ ಆದಾಯ, ಪಿತ್ರಾರ್ಜಿತ ಹಣ, ಚಿನ್ನಕ್ಕೆ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ. ಮನೆಯಲ್ಲಿರುವ ಚಿನ್ನವು ನಿಗದಿತ ಮಿತಿಯಲ್ಲಿದ್ದರೆ, ಆದಾಯ ತೆರಿಗೆ ಅಧಿಕಾರಿಗಳು ಹುಡುಕಾಟದ ಸಮಯದಲ್ಲಿ ಮನೆಯಿಂದ ಚಿನ್ನಾಭರಣಗಳನ್ನು ತೆಗೆದುಕೊಳ್ಳುವಂತಿಲ್ಲ. ಅವುಗಳಿಗೆ ದಾಖಲೆ ಇಲ್ಲದಿದ್ದರೂ ನಡೆಯುತ್ತದೆ. ಆದರೆ, ನಿಗದಿತ ಮಿತಿಗಿಂತ ಹೆಚ್ಚು ಚಿನ್ನ ಸಂಗ್ರಹಿಸಿದ್ದರೆ, ಅದಕ್ಕೆ ದಾಖಲೆ ನೀಡಬೇಕು. ಇಲ್ಲದಿದ್ದರೆ ಅಧಿಕಾರಿಗಳು ಚಿನ್ನವನ್ನು ಜಪ್ತಿ ಮಾಡುತ್ತಾರೆ.
ಚಿನ್ನವು ಈಗ ಹೂಡಿಕೆಯ ದೃಷ್ಟಿಯಿಂದಲೂ ಮಹತ್ವ ಪಡೆದಿದೆ. ಹಾಗಾಗಿ, ಚಿನ್ನವನ್ನು ಖರೀದಿಸಿದ 3 ವರ್ಷಗಳೊಳಗೆ ಮಾರಾಟ ಮಾಡಿದರೆ, ಸರ್ಕಾರವು ಅದರ ಮೇಲೆ ಅಲ್ಪಾವಧಿಯ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ವಿಧಿಸುತ್ತದೆ. ಅದೇ ಸಮಯದಲ್ಲಿ, 3 ವರ್ಷಗಳ ನಂತರ ಚಿನ್ನವನ್ನು ಮಾರಾಟ ಮಾಡಿದರೆ, ದೀರ್ಘಾವಧಿಯ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಪಾವತಿಸಬೇಕಾಗುತ್ತದೆ.