ಅಯೋಧ್ಯೆ: ಬಾಲಿವುಡ್ ನಟ, ಬಿಗ್ ಬಿ ಖ್ಯಾತಿಯ ಅಮಿತಾಭ್ ಬಚ್ಚನ್ ಅವರು ಮತ್ತೆ ಅಯೋಧ್ಯೆಯಲ್ಲಿ ಜಾಗ ಖರೀದಿಸಿದ್ದಾರೆ. ಅಯೋಧ್ಯೆಯ ರಾಮಮಂದಿರದ ಬಳಿಯಲ್ಲೇ ಸುಮಾರು 54,454 ಚದರ ಅಡಿಯ ಜಾಗವನ್ನು ಅಮಿತಾಭ್ ಬಚ್ಚನ್ ಅವರು ಖರೀದಿಸಿದ್ದು, ತಂದೆ ಹರಿವಂಶರಾಯ್ ಬಚ್ಚನ್ ಅವರ ಸ್ಮಾರಕ ನಿರ್ಮಿಸಲಿದ್ದಾರೆ ಎಂದು ತಿಳಿದುಬಂದಿದೆ. ನಟ ಖರೀದಿಸಿರುವ ಜಾಗವು ರಾಮಮಂದಿರದಿಂದ 10 ಕಿಲೋಮೀಟರ್ ದೂರದಲ್ಲಿದೆ ಎಂದು ವರದಿಯಾಗಿದೆ.
ಅಮಿತಾಬ್ ಬಚ್ಚನ್ ಅವರು ಖರೀದಿಸಿದ ಜಾಗವು 54,454 ಚದರ ಅಡಿ ಇದ್ದು, ಕೋಟ್ಯಂತರ ರೂಪಾಯಿ ವ್ಯಯಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಜಾಗ ಖರೀದಿಸಲು ಎಷ್ಟು ಹಣ ಕೊಟ್ಟಿದ್ದಾರೆ ಎಂಬುದು ಬಯಲಾಗಿಲ್ಲ. ಜಾಗ ಖರೀದಿಗೆ ಸಂಬಂಧಿಸಿದಂತೆ ಎಲ್ಲ ಒಪ್ಪಂದಗಳು ಅಂತಿಮಗೊಂಡಿವೆ. ಶೀಘ್ರದಲ್ಲಿಯೇ ಸ್ಮಾರಕ ನಿರ್ಮಾಣವಾಗಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಅಯೋಧ್ಯೆ ರಾಮಮಂದಿರ ಉದ್ಘಾಟನೆ ಮಾಡಲಾದ 2024ರ ಜನವರಿ ತಿಂಗಳಲ್ಲೇ ಅಮಿತಾಭ್ ಬಚ್ಚನ್ ಅವರು ಕೂಡ ರಾಮನಗರಲ್ಲಿ 14.5 ಕೋಟಿ ರೂ. ಕೊಟ್ಟು ಜಾಗ ಖರೀದಿಸಿದ್ದರು. ಸರಯೂ ನದಿಯ ತೀರದಲ್ಲೇ 10 ಸಾವಿರ ಚದರ ಅಡಿ ಜಾಗವನ್ನು ಅವರು ಖರೀದಿಸಿದ್ದರು. ರಾಮಮಂದಿರದಿಂದ ಇದು ಕೇವಲ 15 ನಿಮಿಷದ ಹಾದಿ ಎಂದು ತಿಳಿದುಬಂದಿದೆ.
ಹರಿವಂಶರಾಯ್ ಬಚ್ಚನ್ ಅವರು ಹಿಂದಿ ಖ್ಯಾತ ಕವಿಯಾಗಿದ್ದರು. ಅವರ ಹೆಸರಿನಲ್ಲಿ ಸ್ಮಾರಕದ ಜತೆಗೆ ಗ್ರಂಥಾಲಯವನ್ನೂ ಕಟ್ಟಲಾಗುತ್ತದೆ. ಅಮಿತಾಭ್ ಬಚ್ಚನ್ ಅವರ ಟ್ರಸ್ಟ್ ಇದರ ನೇತೃತ್ವ ವಹಿಸಿಕೊಂಡಿದೆ ಎನ್ನಲಾಗಿದೆ. ಮುಂಬೈ ಸೇರಿ ದೇಶದ ಹಲವೆಡೆ ನಿವೇಶನ, ಫ್ಲ್ಯಾಟ್ ಹೊಂದಿರುವ ಅಮಿತಾಭ್ ಬಚ್ಚನ್ ಅವರ ಒಟ್ಟು 3 ಸಾವಿರ ಕೋಟಿ ರೂ. ಎಂದು ಹೇಳಲಾಗುತ್ತಿದೆ.