ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸೋಮವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆದಿದ್ದು, ಈ ವೇಳೆ ಸಚಿವರಿಬ್ಬರು ಪರಸ್ಪರ ಕಿತ್ತಾಡಿಕೊಂಡಿದ್ದಾರೆಂದು ತಿಳಿದು ಬಂದಿದೆ.
ಬಜೆಟ್ ವಿಷಯದಲ್ಲಿ ವಿರೋಧ ಪಕ್ಷಗಳನ್ನು ಎದುರಿಸಲು ತಯಾರಿ ಮಾಡಬೇಕಿದ್ದ ಶಾಸಕಾಂಗ ಸಭೆಯಲ್ಲಿ ಸಚಿವರು ಹಾಗೂ ಶಾಸಕರು ನಡುವೆ ಪರಸ್ಪರ ಆರೋಪ- ಪ್ರತ್ಯಾರೋಪ ನಡೆದಿದೆ ಎನ್ನಲಾಗಿದೆ. ಅಲ್ಲದೇ, ಸಚಿವರು ಕೈಗೆ ಸಿಗುವುದಿಲ್ಲ ಎಂದು ಹಲವು ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ರಚನೆಯಾಗಿ ಎರಡು ವರ್ಷಗಳಾಗಿವೆ. ಇನ್ನೂ ಶಾಸಕರಿಗೆ ಸಚಿವರು ಸಿಗುತ್ತಲೇ ಇಲ್ಲ. ಭೇಟಿಗೆ ಯತ್ನಿಸಿದರೂ ಏನಾದರೊಂದು ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ. ಕ್ಷೇತ್ರಗಳ ಕೆಲಸಗಳ ನಿಮಿತ್ತ ಸಚಿವರ ಸಂಪರ್ಕಕ್ಕೆ ಯತ್ನಿಸಿದರೂ ಸಿಗುತ್ತಿಲ್ಲ. ಒಂದು ವೇಳೆ ಸಿಕ್ಕಿದರೂ ಕೆಲಸಗಳನ್ನ ಮಾಡಿಕೊಡದೆ ನಿರ್ಲಕ್ಷ್ಯ ಹಿಸುತ್ತಿದ್ದಾರೆಂದು ಹಲವು ಶಾಸಕರು ಆರೋಪಿಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ವರ್ಗಾವಣೆ ವಿಷಯದಲ್ಲಿ ಕೂಡ ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಹಾಗೂ ಸಚಿವ ಎನ್ ಎಸ್ ಭೋಸರಾಜು ನಡುವೆಯೇ ಕಿತ್ತಾಟ ನಡೆದಿದೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಬಹಿರಂಗವಾಗಿಯೇ ಸಚಿವರಿಬ್ಬರೂ ಕಿತ್ತಾಟ ನಡೆಸಿದ ಘಟನೆ ಭಾರೀ ಮುಜುಗರ ಉಂಟು ಮಾಡಿದೆ ಎಂದು ತಿಳಿದು ಬಂದಿದೆ.
ರಾಯಚೂರು ವರ್ಗಾವಣೆ ವಿಚಾರಕ್ಕೆ ಸಚಿವ ಬೋಸರಾಜು ಆಕ್ಷೇಪ ವ್ಯಕ್ತಪಡಿಸಿದ್ದರು. ರಾಯಚೂರು ಹಿಡಿತ ಸಾಧಿಸುವ ಸಲುವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ನಾನು ರಾಯಚೂರು ಜಿಲ್ಲೆಯವನು. ವರ್ಗಾವಣೆ ವಿಚಾರಕ್ಕೆ ಯಾಕೆ ಪತ್ರ ನೀಡುತ್ತೀರಾ? ಎಂದು ಬೋಸರಾಜು ಆಕ್ಷೇಪಿಸಿದ್ದಾರೆ. ನಾನು ರಾಯಚೂರು ಉಸ್ತುವಾರಿ ಸಚಿವ ಎಂದಿರುವ ಶರಣ್ ಪ್ರಕಾಶ್ ಪಾಟೀಲ್, ಶಾಸಕರು ಕೇಳಿದ್ದಾರೆ. ಅದಕ್ಕೆ ಪತ್ರ ನೀಡಿದ್ದೇನೆ ಎಂದಿದ್ದಾರೆ. ಶಾಸಕರ ಬೇಡಿಕೆಗಳಿಗೆ ಸ್ಪಂದಿಸುವುದು ನನ್ನ ಕೆಲಸ ಎಂದು ತಿರುಗೇಟು ನೀಡಿದ ಶರಣಪ್ರಕಾಶ್ ಪಾಟೀಲ್ ಮಾತಿಗೆ ಶಾಸಕ ಬಸನಗೌಡ ದದ್ದಲ್ ಗೆ ಲೇಟರ್ ಕೊಟ್ಟಿದ್ದಕ್ಕೆ ಬೋಸರಾಜು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಷಯವಾಗಿ ಪರಸ್ಪರ ಕಿತ್ತಾಡಿಕೊಂಡಿದ್ದಾರೆ.