ನವದೆಹಲಿ: ಸದನದಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಕ್ಷಮೆ ಕೋರಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ ಕುರಿತ ಚರ್ಚೆಯ ಸಂದರ್ಭದಲ್ಲಿ ಉಪ ಸಭಾಧ್ಯಕ್ಷರಿಗೆ ಅಸಂಸದೀಯ ಭಾಷೆ ಬಳಸಿದ್ದಕ್ಕಾಗಿ ಬಿಜೆಪಿ ಸಂಸದರು (BJP MP) ಖರ್ಗೆ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ವೇಳೆ ಮಲ್ಲಿಕಾರ್ಜುನ್ ಖರ್ಗೆ ಕ್ಷಮೆ ಕೇಳಿದರು.
ಯಾರನ್ನೋ ಹೊಡೆದುರುಳಿಸು ಎಂಬ ಅರ್ಥ ಬರುವ ಈ ಹೇಳಿಕೆಗೆ ಖರ್ಗೆ ಅವರು ಕ್ಷಮೆಯಾಚಿಸಿದರು. ನಂತರ ಅ ಪದವನ್ನು ರಾಜ್ಯಸಭೆಯ ದಾಖಲೆಗಳಿಂದ ತೆಗೆದುಹಾಕಲಾಯಿತು. ರಾಜ್ಯಸಭೆಯಲ್ಲಿ (Rajya Sabha) ಶಿಕ್ಷಣ ಸಚಿವಾಲಯದ ಕಾರ್ಯವೈಖರಿಯ ಕುರಿತು ಚರ್ಚೆ ನಡೆಯುತ್ತಿದ್ದ ವೇಳೆ ಡಿಎಂಕೆ ಸಂಸದರನ್ನು ಅನಾಗರಿಕರು ಎಂದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಕ್ಷಮೆಯಾಚಿಸಬೇಕೆಂದು ಒತ್ತಾಯಿಸಲು ಪ್ರತಿಪಕ್ಷಗಳು ಗದ್ದಲ ನಡೆಸಿದವು.
ಗದ್ದಲದ ನಡುವೆಯೇ ಉಪ ಸಭಾಪತಿ ಹರಿವಂಶ್ ಅವರು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರಿಗೆ ಮಾತನಾಡಲು ಸೂಚಿಸಿದರು. ಸಿಂಗ್ ಮಾತನಾಡುವ ಮೊದಲು ಎದ್ದು ನಿಂತ ಮಲ್ಲಿಕಾರ್ಜುನ್ ಖರ್ಗೆ ತಮ್ಮಗೆ ಮಾತನಾಡಲು ಅವಕಾಶ ನೀಡಬೇಕು ಎಂದರು. ಉಪ ಸಭಾಪತಿ ಹರಿವಂಶ್ ಇದಕ್ಕೆ ನಿರಾಕರಿಸಿದರು. ಇದರಿಂದ ಕುಪಿತಗೊಂಡ ಖರ್ಗೆ ಪೀಠದತ್ತ ಕೈ ಮಾಡಿ ಇದು ಸರ್ವಾಧಿಕಾರ ಎಂದು ಹೇಳಿದರು. ನೀವು ಬೇರೆ ಏನೋ ಹೊಡೆಯಲು ಬಯಸುತ್ತೀರಿ, ನಾವೇ ಅದನ್ನು ಸರಿಯಾಗಿ ಹೊಡೆಯುತ್ತೇವೆ ಎಂದರು. ಖರ್ಗೆ ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತವಾಯಿತು. ಕೊನೆಗೆ ಖರ್ಗೆ ಕ್ಷಮೆಯಾಚಿಸಿದರು.