ಬೆಂಗಳೂರು: ಪಿ.ಸಿ.ಶೇಖರ್ ನಿರ್ದೇಶನದ, ಎಸ್ ಆರ್ ವೆಂಕಟೇಶ್ ಗೌಡ ನಿರ್ಮಿಸಿರುವ ಹಾಗೂ ನಕುಲ್ ಗೌಡ ನಾಯಕನಾಗಿ ನಟಿಸಿರುವ “BAD” ಚಿತ್ರಕ್ಕಾಗಿ ಖ್ಯಾತ ಸಾಹಿತಿ ಕವಿರಾಜ್ ಬರೆದಿರುವ “ನೀ ಬರುವೆ ಅಂತ ನಾ ಕಾದು ಕುಂತ” ಪ್ರೇಮಗೀತೆ ಇತ್ತೀಚೆಗಷ್ಟೇ ಬಿಡುಗಡೆಯಾಯಿತು.
ಈ ಪ್ರೇಮ ಗೀತೆಯನ್ನು ಜಂಕಾರ್ ಮ್ಯೂಸಿಕ್ ಮೂಲಕ ಬಿಡುಗಡೆ ಮಾಡಲಾಯಿತು. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಹಾಡನ್ನು “ಸರಿಗಮಪ” ಖ್ಯಾತಿಯ ಪೃಥ್ವಿ ಭಟ್ ಸುಶ್ರಾವ್ಯವಾಗಿ ಹಾಡಿದ್ದಾರೆ. ಈ ಹಾಡು ಜನರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ನಕುಲ್ ಗೌಡ ಹಾಗೂ ಮಾನ್ವಿತ ಹರೀಶ್ ಈ ಹಾಡಿನಲ್ಲಿ ಅಭಿನಯಿಸಿದ್ದಾರೆ.
ನಾಯಕನ ಬರುವಿಕೆಗಾಗಿ ಕಾದು ಕುಳಿತ್ತಿರುವ ನಾಯಕಿ, ಕಾಯುವಿಕೆಯ ಆ ಸಮಯದಲ್ಲಿ ಏನೆಲ್ಲಾ ಕಲ್ಪಿಸಿಕೊಳ್ಳುತ್ತಾಳೆ ಎಂಬುವುದನ್ನು ಈ ಹಾಡಿನ ಮೂಲಕ ತೋರಿಸಲಾಗಿದೆ ಎಂದು ತಿಳಿಸಿರುವ ನಿರ್ದೇಶಕ ಪಿ.ಸಿ.ಶೇಖರ್, ಕಾಮ, ಕ್ರೋಧ ಮೊದಲಾದ ಅರಿಷಡ್ವರ್ಗಗಳನ್ನು ಪ್ರತಿನಿಧಿಸುವ ಆರು ಪಾತ್ರಗಳಲ್ಲಿ ಆರು ಜನ ಕಲಾವಿದರು ಅಭಿನಯಿಸಿರುವುದು ಈ ಚಿತ್ರದ ವಿಶೇಷ ಎನ್ನುತ್ತಾರೆ.

“BAD” ಚಿತ್ರದ ಚಿತ್ರೀಕರಣ ಹಾಗೂ ನಂತರದ ಚಿತ್ರೀಕರಣ ಮುಕ್ತಾಯವಾಗಿದೆ. ಟೀಸರ್ ಮೂಲಕ ಸದ್ದು ಮಾಡುತ್ತಿರುವ ಈ ಚಿತ್ರದ ಹಾಡುಗಳು ಸಹ ಜನಪ್ರಿಯವಾಗುತ್ತಿದೆ.
ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿರುವ “BAD” ಚಿತ್ರಕ್ಕೆ ನಿರ್ದೇಶಕ ಪಿ.ಸಿ.ಶೇಖರ್ ಅವರೆ ಸಂಕಲನ ಕಾರ್ಯ ಮಾಡಿದ್ದಾರೆ. ಜಿ.ರಾಜಶೇಖರ್ ಕಲಾ ನಿರ್ದೇಶನ ಹಾಗೂ ಶಕ್ತಿ ಶೇಖರ್ ಛಾಯಾಗ್ರಹಣವಿರುವ “BAD” ಚಿತ್ರಕ್ಕೆ ಸಚಿನ್ ಜಗದೀಶ್ವರ್ ಎಸ್ ಬಿ ಸಂಭಾಷಣೆ ಬರೆದಿದ್ದಾರೆ.
“ಪ್ರೀತಿಯ ರಾಯಭಾರಿ” ಚಿತ್ರದ ಮೂಲಕ ಜನರ ಮನಗೆದ್ದಿರುವ ನಕುಲ್ ಗೌಡ “BAD” ಚಿತ್ರದ ನಾಯಕನಾಗಿ ಕಾಣಿಸಿಕೊಂಡಿದ್ದು, ಮಾನ್ವಿತ ಹರೀಶ್, ಸಾಯಿ ಕೃಷ್ಣ, ಅಪೂರ್ವ ಭಾರದ್ವಾಜ್, ಮಂಜುನಾಥ್ , ಅಶ್ವಿನಿ ಮುಂತಾದವರು ಈ ಚಿತ್ರದ ತಾರಾ ಬಳಗದಲ್ಲಿದ್ದಾರೆ.