ಬೆಂಗಳೂರು: ಬೆಂಗಳೂರಿನಲ್ಲಿ ನಡೆಯಲಿರುವ ಐಪಿಎಲ್ ಪಂದ್ಯಕ್ಕೆ ಜಲಕಂಟಕ ಎದುರಾಗುವ ಆತಂಕ ಶುರುವಾಗಿದೆ. ಹೀಗಾಗಿ ಸಂಸ್ಕರಿಸಿದ ನೀರನ್ನೇ ಐಪಿಎಲ್ ಪಂದ್ಯದಲ್ಲಿ ಬಳಸುವಂತೆ ಜಲ ಮಂಡಳಿ ಖಡಕ್ ಆಗಿ ಸೂಚಿಸಿದೆ.
ಈಗಾಗಲೇ ನಗರಕ್ಕೆ ಬೇಸಿಗೆ ಆರಂಭವಾಗಿದ್ದು, ಜಲಮಂಡಳಿ ಫುಲ್ ಅಲರ್ಟ್ ಆಗಿದೆ. ಈಗಾಗಲೇ ಕುಡಿಯುವ ನೀರನ್ನು ಮೈದಾನಗಳಿಗೆ ಬಳಸುವಂತಿಲ್ಲ. ಬಳಸಿದರೆ ದಂಡ ವಿಧಿಸಲಾಗುವುದು ಎಂದು ಖಡಕ್ ವಾರ್ನಿಂಗ್ ನೀಡಿದೆ. ಈ ವಿಷಯವಾಗಿ ಐಪಿಎಲ್ ಆಯೋಜಕರಿಗೆ ಕೂಡ ಜಲ ಮಂಡಳಿ ಸೂಚನೆ ನೀಡಿದೆ. ಬೆಂಗಳೂರಿನ ಚಿನ್ನಸ್ವಾಮಿ ಗ್ರೌಂಡ್ ನಲ್ಲಿ ಪಂದ್ಯದ ವೇಳೆ ಕುಡಿಯುವ ನೀರು ಬಳಸದಂತೆ ಸೂಚನೆ ನೀಡಲಾಗಿದೆ.
ಪ್ರತಿ ಪಂದ್ಯದ ಸಂದರ್ಭದಲ್ಲಿ ಕ್ರೀಡಾಂಗಣಕ್ಕೆ ನೀರುಣಿಸಲು 75 ಸಾವಿರ ಲೀಟರ್ ನೀರು ಬೇಕು. ಆದರೆ, ಈಗ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉದ್ಭವ ಆಗುವ ಸಾಧ್ಯತೆ ಇರುತ್ತದೆ. ನಗರದಲ್ಲಿ ಅಂತರ್ಜಲ ಮಟ್ಟ ಕುಸಿದಿರುವ ಬಗ್ಗೆ ಈಗಾಗಲೇ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಐಪಿಎಲ್ ಪಂದ್ಯದ ವೇಳೆ ಕುಡಿಯುವ ನೀರನ್ನು ಬಳಸಬಾರದು ಎಂದು ಜಲಮಂಡಳಿ ಸೂಚಿಸಿದೆ. ಕಬ್ಬನ್ ಉದ್ಯಾನದ ತ್ಯಾಜ್ಯ ನೀರು ಸಂಸ್ಕರಣ ಘಟಕದಿಂದ ಸಂಸ್ಕರಿಸಿದ ನೀರನ್ನಷ್ಟೇ ಕ್ರೀಡಾಂಗಣಕ್ಕೆ ಸರಬರಾಜು ಮಾಡಲು ಜಲಮಂಡಳಿ ಅನುಮತಿ ನೀಡಿದೆ.