ಬೆಂಗಳೂರು: ನಾವು ಕಷ್ಟಪಟ್ಟು ದುಡಿ ಹಣವನ್ನು ಕೂಡ ದುಡಿಸಬೇಕು ನಿಜ. ನಾವು ನಿದ್ದೆ ಮಾಡುವಾಗಲೂ ನಮ್ಮ ಹಣವು ನಮಗಾಗಿ ದುಡಿಯಬೇಕು ಎಂಬುದು ಕೂಡ ಸತ್ಯವೇ. ಆದರೆ, ಹೂಡಿಕೆ ಮಾಡುವಾಗ ಯಾವುದರಲ್ಲಿ ಹೂಡಿಕೆ ಮಾಡಬೇಕು? ಯಾವ ಅಪಾಯಕಾರಿ ಹೂಡಿಕೆ ಮಾರ್ಗಗಗಳನ್ನು ಅನುಸರಿಸಬಾರದು ಎಂಬುದರ ಕುರಿತು ಕೂಡ ನಮಗೆ ಸ್ಪಷ್ಟ ಕಲ್ಪನೆ ಇರಬೇಕು. ಇಲ್ಲದಿದ್ದರೆ ನಾವು ಹಣ ಕಳೆದುಕೊಳ್ಳಬೇಕಾಗುತ್ತದೆ. ಹಾಗಾಗಿ, ಮಾರುಕಟ್ಟೆ ಬಗ್ಗೆ ಮಾಹಿತಿ ಇಲ್ಲದಿದ್ದರೆ, ಹೂಡಿಕೆಯ ಮಾದರಿ ಬಗ್ಗೆ ತಿಳಿಯದಿದ್ದರೆ, ಈ ನಾಲ್ಕು ಹೂಡಿಕೆಗಳಿಂದ ದೂರ ಇರುವುದು ಒಳಿತು.
- ಯುಲಿಪ್ ಶುಲ್ಕ ಹೆಚ್ಚು, ರಿಟರ್ನ್ಸ್ ಅಷ್ಟಕ್ಕಷ್ಟೆ
ಯುನಿಟ್ ಲಿಂಕ್ಡ್ ಇನ್ಶೂರೆನ್ಸ್ ಪ್ಲಾನ್ ಗಳು (ಯುಲಿಪ್) ಈಗ ಹೆಚ್ಚಾಗಿವೆ. ಇನ್ಶೂರೆನ್ಸ್ ಮತ್ತು ಹೂಡಿಕೆಯ ಮಿಶ್ರಣವಾಗಿರುವ ಯುಲಿಪ್ ಮಾದರಿಯ ಹೂಡಿಕೆಯಲ್ಲಿ ಹೆಚ್ಚಿನ ಇನ್ಶೂರೆನ್ಸ್ ಕವರೇಜ್ ದೊರೆಯುವುದಿಲ್ಲ. ಹಾಗೆಯೇ, ಹೂಡಿಕೆಯ ಮೇಲೆ ಹೆಚ್ಚಿನ ರಿಟರ್ನ್ಸ್ ಕೂಡ ದಕ್ಕುವುದಿಲ್ಲ. ಯುಲಿಪ್ ಯೋಜನೆಗಳಲ್ಲಿ ಹೂಡಿಕೆ ಮಾಡಿದಾಗ ಮೊದಲ ವರ್ಷದ ಶುಲ್ಕವೇ ಶೇ.8ರಿಂದ ಶೇ.10ರಷ್ಟು ಇರುತ್ತದೆ. ರಿಟರ್ನ್ಸ್ ಕೂಡ ಶೇ.8-10ರಷ್ಟೇ ಇರುತ್ತದೆ. ಹಾಗೆಯೇ, ಆಡಳಿತ ಶುಲ್ಕ, ನಿರ್ವಹಣಾ ಶುಲ್ಕ, ಪ್ರಾಣಹಾನಿ ಶುಲ್ಕಗಳನ್ನು ವಿಧಿಸುವ ಜತೆಗೆ ವಿಮಾ ಕಂತಿಗೆ ಶೇ.18ರಷ್ಟು ಜಿಎಸ್ ಟಿಯನ್ನೂ ಪಾವತಿಸಬೇಕಾಗುತ್ತದೆ. - ಪೀರ್ ಟು ಪೀರ್ ಸಾಲದ ಬಗ್ಗೆ ಎಚ್ಚರಿಕೆ ಇರಲಿ
ಪೀರ್ ಟು ಪೀರ್ ಅಂದರೆ, ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ ಸಾಲ ಕೊಡಿಸುವ ಹತ್ತಾರು ಲೆಂಡಿಂಗ್ ಪ್ಲಾಟ್ ಫಾರಂಗಳಿವೆ. ಆದರೆ, ಇವುಗಳಲ್ಲಿ ದುಡ್ಡು ಹಾಕುವುದರಿಂದ ಹೆಚ್ಚು ಅಪಾಯ ಇರುತ್ತದೆ. ಶೇ.12ರಷ್ಟು ರಿಟರ್ನ್ಸ್ ಕೊಡಿಸುವ ಭರವಸೆ ಇದ್ದರೂ ರಿಸ್ಕ್ ಇರುತ್ತದೆ. ಆನ್ ಲೈನ್ ಪ್ಲಾಟ್ ಫಾರಂಗಳ ಮೂಲಕ ನೀವು ಇನ್ನೊಬ್ಬರಿಗೆ ಸಾಲ ಕೊಡಿಸುವ ಕಾರಣ ಸಾಲ ಪಡೆದವರು ಹಿಂತಿರುಗಿಸದಿದ್ದರೆ ನಷ್ಟವಾಗುತ್ತದೆ. - ಡಿಜಿಟಲ್ ಗೋಲ್ಡ್
ಮೇಕಿಂಗ್ ಚಾರ್ಜ್ ಇರದ ಕಾರಣ ಡಿಜಿಟಲ್ ಗೋಲ್ಡ್ ಜನಪ್ರಿಯ ಹೂಡಿಕೆಯ ಮಾದರಿ ಎನಿಸಿದೆ. ಆದರೆ, ಈ ಮಾದರಿಯ ಹೂಡಿಕೆಯಲ್ಲಿ ಪಾರದರ್ಶಕತೆಯ ಕೊರತೆ ಇದೆ. ಪ್ರತಿ ಬಾರಿ ಡಿಜಿಟಲ್ ಗೋಲ್ಡ್ ಖರೀದಿಸಿದಾಗಲೂ ಶೇ.3ರಷ್ಟು ಜಿಎಸ್ ಟಿ ಪಾವತಿಸಬೇಕು. ಅದೇ ಚಿನ್ನವನ್ನು ಮಾರಾಟ ಮಾಡುವಾಗ ನೀವು ಕಟ್ಟಿದ ಜಿಎಸ್ ಟಿ ವಾಪಸ್ ಸಿಗುವುದಿಲ್ಲ. ಜತೆಗೆ, ಮಾರಾಟ ಮಾಡುವ ಪ್ಲಾಟ್ ಫಾರಂಗಳಲ್ಲಿ ವಿಧಿಸುವ ನಿರ್ವಹಣಾ ಶುಲ್ಕ, ಮಾರುಕಟ್ಟೆ ಬೆಲೆಯಲ್ಲಿ ಪಾರದರ್ಶಕತೆ ಇರುವುದಿಲ್ಲ ಎಂಬ ಆರೋಪಗಳಿವೆ.
ಗಮನಿಸಿ: ಮೂರು ಮಾದರಿಗಳಲ್ಲಿ ಹೆಚ್ಚಿನ ಜನ ಹೂಡಿಕೆ ಮಾಡುತ್ತಾರೆ ನಿಜ. ಆದರೆ, ನಾವು ನಿಮಗೆ ಇಲ್ಲಿ ಹೂಡಿಕೆಯ ಸುರಕ್ಷತೆಯ ಬಗ್ಗೆ ಮಾಹಿತಿ ನೀಡಲು ವಿಶ್ಲೇಷಣೆ ಮಾಡಿದ್ದೇವೆ ಅಷ್ಟೆ. ಯಾವುದೇ ರೀತಿಯ ಹೂಡಿಕೆ ಮಾಡುವಾಗ ಆರ್ಥಿಕ ತಜ್ಞರ ಸಲಹೆ ಪಡೆಯುವುದನ್ನು ಮರೆಯದಿರಿ.



















