ಬೆಂಗಳೂರು: ವಿಧಾನಸಭಾ ಅಧಿವೇಶನದಲ್ಲಿ (Assembly session) ಇಂದು ಗದ್ದಲದ ಮಧ್ಯೆಯೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವಿಭಾಗಿಸಿ ಗ್ರೇಟರ್ ಬೆಂಗಳೂರು ಮಾಡಲು ಹೊರಟಿರುವ ವಿಧೇಯಕಕ್ಕೆ ಅಂಗೀಕಾರ ಪಡೆಯಲಾಯಿತು. ಇದನ್ನು ವಿರೋಧ ಪಕ್ಷಗಳು ವಿರೋಧಿಸಿದವು.
ಪಾಲಿಕೆ ವಿಭಾಗಿಸಬೇಕು ಎಂಬ ಜಟಾಪಟಿಯ ಮಧ್ಯೆಯೇ ಕಾಲಾಹರಣ ಮಾಡುತ್ತ ಕಳೆದ 5 ವರ್ಷಗಳಿಂದ ಪಾಲಿಕೆಗೆ ಚುನಾವಣೆ ನಡೆಸಿಲ್ಲ. ಬೆಂಗಳೂರನ್ನು ಹಲವು ಭಾಗ ಮಾಡಿ ಗ್ರೇಟರ್ ಬೆಂಗಳೂರು ಮಾಡಲು ಸಿದ್ದರಾಮಯ್ಯ ಸರ್ಕಾರ ಮುಂದಾಗಿತ್ತು. ಇದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿತ್ತು. ವಿರೋಧದ ಮಧ್ಯೆಯೂ ಡಿಸಿಎಂ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್, ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ-2024ನ್ನು ಮಂಡಿಸಿದರು.
ಡಿಕೆ ಶಿವಕುಮಾರ್ ವಿಧೇಯಕ ಮಂಡಿಸುತ್ತಿದ್ದಂತೆ ಸದನದಲ್ಲಿ ತೀವ್ರ ವಿರೋಧ ವ್ಯಕ್ತವಾಯಿತು. ಬಿಜೆಪಿ ಸದಸ್ಯರು ಆಕ್ರೋಶ ಹೊರಹಾಕಿದರು. ವಿರೋಧದ ನಡುವೆಯೇ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ಸಿಕ್ಕಿತು. ಕನಿಷ್ಠ 10 ಲಕ್ಷ ಜನಸಂಖ್ಯೆಗೆ ಒಂದರಂತೆ ಪಾಲಿಕೆ ಇರಬೇಕು ಎಂದು ವಿಧೇಯಕದಲ್ಲಿ ಹೇಳಲಾಗಿದ್ದು, ಬಿಬಿಎಂಪಿ ಎಷ್ಟು ಹೋಳಾಗಲಿದೆ ಎಂಬುವುದು ಮಾತ್ರ ಖಚಿತವಾಗಿಲ್ಲ.