10 ಮಾರ್ಚ್ 2025: ಸುರಕ್ಷಿತ ಮತ್ತು ಜವಾಬ್ದಾರಿಯುತ ಗೇಮಿಂಗ್ ಅನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿ ಆಲ್ ಇಂಡಿಯಾ ಗೇಮಿಂಗ್ ಫೆಡರೇಶನ್ (AIGF), ಫೆಡರೇಶನ್ ಆಫ್ ಇಂಡಿಯಾ ಫ್ಯಾಂಟಸಿ ಸ್ಪೋರ್ಟ್ಸ್ (FIFS) ಮತ್ತು ಇ-ಗೇಮಿಂಗ್ ಫೆಡರೇಶನ್ (EGF) ಇಂದು ಜಂಟಿಯಾಗಿ ನೈತಿಕತೆಗಳ ನೀತಿ (CoE) ಗೆ ಸಹಿ ಹಾಕಿದೆ. ಜವಾಬ್ದಾರಿಯುತ ಗೇಮಿಂಗ್ ಮತ್ತು ಜಾಹೀರಾತು ನೀತಿಗಳ ಅನುಷ್ಠಾನ ಮಾಡುವ ಮೂಲಕ ಉದ್ಯಮದಲ್ಲಿ ಬಳಕೆದಾರರ ಸುರಕ್ಷತೆ ಮಾನದಂಡವನ್ನು ಜಾರಿಗೊಳಿಸುವ ಉದ್ದೇಶವನ್ನು ಸಿಒಇ ಹೊಂದಿದೆ. ಅಲ್ಲದೆ, ವಾರ್ಷಿಕ ಥರ್ಡ್ ಪಾರ್ಟಿ ಆಡಿಟ್‌ಗಳನ್ನು ನಡೆಸುವುದು ಮತ್ತು ಸಮಗ್ರ ವರದಿ ಮಾಡುವಿಕೆ ಕಾರ್ಯತಂತ್ರಗಳನ್ನು ಜಾರಿಗೊಳಿಸುವ ಮೂಲಕ ಹೊಣೆಗಾರಿಕೆ ಮತ್ತು ಪಾರದರ್ಶಕತೆಯನ್ನು ಖಾತರಿಪಡಿಸುವುದು ಇದರ ಗುರಿಯಾಗಿದೆ.
ಜಾಗತಿಕ ಉತ್ತಮ ಅಭ್ಯಾಸಗಳನ್ನು ಆಧರಿಸಿ ಸಿಒಇ ಅನ್ನು ರೂಪಿಸಲಾಗಿದೆ ಮತ್ತು ಜವಾಬ್ದಾರಿಯುತ ಗೇಮಿಂಗ್‌ಗೆ ಉತ್ತಮ ರೂಪುರೇಷೆಯನ್ನು ಇದು ರೂಪಿಸಿದೆ. ಇದರಲ್ಲಿ ಏಜ್ ಗೇಟಿಂಗ್, ಕಟ್ಟುನಿಟ್ಟಾದ ಕೆವೈಸಿ ಅಳವಡಿಸಿಕೊಳ್ಳುವುದು, ಬಳಕೆದಾರರು ನಿಗದಿಪಡಿಸಿದ ಮಿತಿಗಳು ಮತ್ತು ಸ್ವಯಂ ಜಾರಿಗೊಳಿಸುವಿಕೆಯನ್ನು ಇದರಲ್ಲಿ ಸಕ್ರಿಯಗೊಳಿಸಲಾಗಿದೆ. ಇದು ಸಂಘಟನೆಯ ಸದಸ್ಯರಾಗಿರುವ ಮತ್ತು ಭಾರತದಲ್ಲಿನ ಸ್ಕಿಲ್ ಆಧರಿತ ರಿಯಲ್ ಮನಿ ಗೇಮಿಂಗ್ ಸೇವೆಗಳನ್ನು ನೀಡುವ ಎಲ್ಲ ಆನ್‌ಲೈನ್ ಗೇಮಿಂಗ್ ಆಪರೇಟರ್‌ಗಳಿಗೆ ಅನ್ವಯಿಸುತ್ತದೆ ಮತ್ತು 50 ಕೋಟಿಗೂ ಹೆಚ್ಚು ಭಾರತೀಯ ಗೇಮರ್‌ಗಳ ಹಿತಾಸಕ್ತಿಯನ್ನು ರಕ್ಷಿಸುತ್ತದೆ.
ರೂ. 100 ಕೋಟಿ ಅಥವಾ ಹೆಚ್ಚು ವಾರ್ಷಿಕ ಆದಾಯವನ್ನು ಹೊಂದಿರುವ ಗೇಮಿಂಗ್ ಆಪರೇಟರ್‌ಗಳು ಸಹಿ ಮಾಡಿದ ದಿನಾಂಕದಿಂದ ಆರು ತಿಂಗಳೊಳಗೆ ಈ ನೀತಿಯನ್ನು ಅನುಷ್ಠಾನಗೊಳಿಸಬೇಕು. ರೂ. 100 ಕೋಟಿಗಿಂತ ಕಡಿಮೆ ವಾರ್ಷಿಕ ಆದಾಯವನ್ನು ಹೊಂದಿರುವವರು ಒಂಬತ್ತು ತಿಂಗಳೊಳಗೆ ಅನುಷ್ಠಾನಗೊಳಿಸಬೇಕು. ಯಶಸ್ವಿಯಾಗಿ ಅಳವಡಿಸಿಕೊಂಡ ನಂತರ, ಒಂದು ವರ್ಷಕ್ಕೆ ಮಾನ್ಯವಾಗಿರುವ ಪ್ರಮಾಣಪತ್ರವನ್ನು ಸಂಘನಟೆಯು ನೀಡುತ್ತದೆ. ತೃತೀಯ ಪಕ್ಷದ ಸ್ವತಂತ್ರ ಆಡಿಟ್ ಅನ್ನು ನಡೆಸಿದ ನಂತರ ಪ್ರತಿ ವರ್ಷ ಇದನ್ನು ನವೀಕರಿಸಬಹುದು. ನೀತಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿದೆ ಎಂಬುದಕ್ಕೆ ಮತ್ತು ಸುಧಾರಣೆಯ ಕ್ಷೇತ್ರಗಳನ್ನು ಗುರುತಿಸಲು ನೀತಿಯನ್ನು ವಾರ್ಷಿಕವಾಗಿ ಪರಿಶೀಲಿಸಲಾಗುತ್ತದೆ.
ಅಖಿಲ ಭಾರತ ಗೇಮಿಂಗ್ ಫೆಡರೇಶನ್‌ನ ಸಿಇಒ ರೋಲ್ಯಾಂಡ್ ಲ್ಯಾಂಡರ್ಸ್ ಮಾತನಾಡಿ “ಅತಿದೊಡ್ಡ ಮತ್ತು ಹಳೆಯ ಉದ್ಯಮದ ಸಂಘಟನೆಯಾಗಿರುವ AIGF ಯ ಅಭಿಪ್ರಾಯವೇನೆಂದರೆ, ಜವಾಬ್ದಾರಿ, ಪಾರದರ್ಶಕತೆ, ಅನ್ವೇಷಣೆ ಮತ್ತು ಆಟಗಾರರ ರಕ್ಷಣೆಯ ಆಧಾರ ಸ್ಥಂಭಗಳಲ್ಲಿ ಗೇಮಿಂಗ್ ಉದ್ಯಮವನ್ನು ನಿರ್ಮಾಣ ಮಾಡಬೇಕು. ಈ ನೈತಿಕತೆ ನಿಯಮಗಳು ನ್ಯಾಯೋಚಿತ ಆಟ, ಭಾರತೀಯ ಕಾನೂನುಗಳನ್ನು ಅನುಸರಿಸುವುದು ಮತ್ತು ಸುರಕ್ಷಿತ ಮತ್ತು ಜವಾಬ್ದಾರಿಯುತ ಗೇಮಿಂಗ್ ಪರಿಸರವನ್ನು ಪೋಷಿಸುವ ವಿಷಯದಲ್ಲಿ ನಮ್ಮ ಬದ್ಧತೆಯನ್ನು ಸಾಬೀತುಪಡಿಸುತ್ತವೆ. ಇತರ ಉದ್ಯಮದ ಸಂಘಟನೆಗಳ ಜೊತೆಗೆ ಸಹಭಾಗಿತ್ವದ ಮೂಲಕ ನೈತಿಕ ಗೇಮಿಂಗ್‌ಗೆ ಹೊಸ ಮಾನದಂಡವನ್ನು ನಾವು ನಿಗದಿಪಡಿಸುತ್ತಿದ್ದೇವೆ. ಭಾರತದ ಆನ್‌ಲೈನ್ ಗೇಮಿಂಗ್ ವಲಯದ ವಿಶ್ವಾಸಾರ್ಹತೆಯನ್ನು ಬಲಪಡಿಸುತ್ತಿದ್ದೇವೆ ಮತ್ತು ಸುಸ್ಥಿರ ಹಾಗೂ ಜಾಗತಿಕವಾಗಿ ಸ್ಫರ್ಧಾತ್ಮಕ ಪರಿಸರ ವ್ಯವಸ್ಥೆಯನ್ನು ನಿರ್ಮಿಸುತ್ತಿದ್ದೇವೆ.”
ಈ ಯೋಜನೆಯ ಬಗ್ಗೆ ಮಾತನಾಡಿದ FIFS ಪ್ರಧಾನ ನಿರ್ದೇಶಕ ನೀಲ್ ಕಾಸ್ಟೆಲೀನೋ “ಈ ಜಂಟಿ ನೀತಿಯು ಸುರಕ್ಷಿತ, ನ್ಯಾಯೋಚಿತ ಮತ್ತು ಜವಾಬ್ದಾರಿಯುತ ಗೇಮಿಂಗ್ ಪರಿಸರವನ್ನು ರಕ್ಷಿಸುವ ನಿಟ್ಟಿನಲ್ಲಿ ನಮ್ಮ ಬದ್ಧತೆಯನ್ನು ಸಾಬೀತುಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಒಂದು ಉದ್ಯಮವಾಗಿ ಒಟ್ಟಿಗೆ ಕೆಲಸ ಮಾಡುವ ಮೂಲಕ ನಾವು ಒಂದು ಕ್ರೋಢೀಕೃತ ಮಾನದಂಡವನ್ನು ನಿಗದಿಪಡಿಸುತ್ತಿದ್ದೇವೆ. ಇದು ಆಟಗಾರರ ಯೋಗಕ್ಷೇಮ, ಸಮಗ್ರತೆ ಮತ್ತು ಹೊಣೆಗಾರಿಕೆಗೆ ಆದ್ಯತೆ ನೀಡುತ್ತದೆ. ದೇಶದಲ್ಲಿನ 24 ಕೋಟಿ FS ಬಳಕೆದಾರರಿಗೆ ಸುರಕ್ಷಿತ ವಾತಾವರಣವನ್ನು ಒದಗಿಸುವಲ್ಲಿ ಇದು ಮಹತ್ವದ್ದಾಗಿದೆ ಎಂದು ನಾವು ಭಾವಿಸುತ್ತೇವೆ.”
EGF ನ CEO ಅನುರಾಗ್ ಸಕ್ಸೇನಾ ಹೇಳುವಂತೆ “ರಾಷ್ಟ್ರೀಯ ಹಿತಾಸಕ್ತಿ, ಗ್ರಾಹಕರ ಹಿತಾಸಕ್ತಿ ಮತ್ತು ಉದ್ಯಮದ ಹಿತಾಸಕ್ತಿಯು ಹಲವು ಕಾಲದಿಂದಲೂ ತೊಂದರೆಗೀಡಾಗಿದೆ. ಅನೈತಿಕವಾದ ಗ್ಯಾಂಬ್ಲಿಂಗ್ ಆಪರೇಟರ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಇವು ದೇಶಕ್ಕೆ ಹಾನಿ ಮಾಡುತ್ತಿವೆ. ಇದರಿಂದ ದೇಶದ ತೆರಿಗೆಯೂ ನಷ್ಟವಾಗುತ್ತಿದೆ ಮತ್ತು ಜನರಿಗೂ ನಷ್ಟವಾಗುತ್ತಿದೆ. ಇಂದು ಜಂಟಿ ನೀತಿಯನ್ನು ರೂಪಿಸುವುದಕ್ಕೆ ಉದ್ಯಮವು ಸಹಭಾಗಿತ್ವ ಸಾಧಿಸುತ್ತಿರುವುದು ನಮಗೆ ಖುಷಿ ನೀಡಿದೆ. ತೃತೀಯ ಪಕ್ಷದ ಆಡಿಟ್‌ಗಳು, ಜವಾಬ್ದಾರಿಯುತ ಗೇಮಿಂಗ್ ನೀತಿಗಳು ಮತ್ತು ನೈತಿಕ ಬ್ಯುಸಿನೆಸ್ ಅಭ್ಯಾಸಗಳ ಮೂಲಕ ಹೊಣೆಗಾರಿಕೆಯನ್ನು ವ್ಯಕ್ತಪಡಿಸಲು ಈ ಮಾನದಂಡಗಳು ಮಹತ್ವದ ಪಾತ್ರ ವಹಿಸುತ್ತವೆ. ಸೂರ್ಯನ ಕಿರಣವೇ ಅತ್ಯುತ್ತಮ ಸೋಂಕುನಿವಾರಕವಾಗಿದ್ದು, ಈ ನಿಟ್ಟಿನಲ್ಲಿ ಉದ್ಯಮವು ಮಹತ್ವದ ಹೆಜ್ಜೆ ಇಟ್ಟಿರುವುದು ಅತ್ಯಂತ ಗಮನಾರ್ಹವಾಗಿದೆ.”