ಬೆಂಗಳೂರು: ಹೆಣ್ಣು ಎಂದರೆ ಜೀವನ ಪೂರ್ತಿ ತ್ಯಾಗ ಮಾಡುವವಳು. ಅಮ್ಮ ಎಂದರೆ ನೋವು ನುಂಗಿಕೊಂಡು ತ್ಯಾಗದ ಬದುಕು ಸವೆಸುವವಳು ಎಂದು ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅಭಿಪ್ರಾಯ ಪಟ್ಟಿದ್ದಾರೆ.
ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ನಡೆದ ಅಂತಾರಾಷ್ಟ್ರೀಯ ವಿಶ್ವ ಮಹಿಳಾ ದಿನಾಚರಣೆ ಮತ್ತು ಸಾಧಕ ಮಹಿಳೆಯರಿಗೆ ದಿಟ್ಟ ಮಹಿಳಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೇದ, ಪುರಾಣ ಕಾಲದಿಂದಲೂ ಹೆಣ್ಣಿನ ಶಕ್ತಿ ಏನು ಎಂಬುವುದು ತಿಳಿದಿದೆ. ಮಹಿಳೆಯರಿಗೆ ದಿಟ್ಟತನ ಇರಬೇಕು. ಆದರೆ, ಆಸೆಗಳ ಹಿಂದೆ ಹೋಗಬಾರದು. ಇರುವುದರಲ್ಲಿ ತೃಪ್ತಿಪಟ್ಟುಕೊಂಡು ಜೀವನ ಸಾಗಿಸಬೇಕು. ದೇವರ ಇಚ್ಚೆ ಮುಂದೆ ನಮ್ಮ ಇಚ್ಚೆ ನಡೆಯುವುದಿಲ್ಲ ಎಂದು ಹೇಳಿದ್ದಾರೆ.
ಈ ವೇಳೆ ಹಿರಿಯ ನಟಿಯರಾದ ಭಾರತಿ ವಿಷ್ಣುವರ್ಧನ್, ಜಯಮಾಲ, ಸರಿತಾ, ಗೀತಾ, ಅಂಬಿಕಾ, ಲಕ್ಷ್ಮಿ ಗೋವಿಂದರಾಜು, ಪೂರ್ಣಿಮಾ ರಾಮ್ ಅವರಿಗೆ ದಿಟ್ಟ ಮಹಿಳಾ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ. ವಿಶೇಷ ಆಯುಕ್ತರಾದ ಪ್ರೀತಿ ಗೆಹ್ಲೋಟ್, ಕೆ.ಹರೀಶ್ ಕುಮಾರ್, ವಲಯ ಆಯುಕ್ತರಾದ ಸ್ನೇಹಲ್ ಆರ್, ಅರ್ಚನಾ ಎಂ.ಎಸ್.ಕರೀಗೌಡ, ಕೆ.ಎನ್. ರಮೇಶ್, ಉಪ ಆಯುಕ್ತ ಮಂಜುನಾಥ ಸ್ವಾಮಿ, ನಟಿ ವಿನಯಾ ಪ್ರಸಾದ್, ಕಾರ್ಯಕ್ರಮದ ರೂವಾರಿ ಎ. ಅಮೃತ್ ರಾಜ್ ಸೇರಿದಂತೆ ಹಲವರು ಇದ್ದರು.