ಶ್ರೀನಗರ:
ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್‌ನಲ್ಲಿ ನಡೆದ ಫ್ಯಾಶನ್ ಶೋ(Fashion Show) ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಮುಸ್ಲಿಮರ ಪವಿತ್ರ ಮಾಸ ರಂಜಾನ್ ಸಮಯದಲ್ಲೇ ಈ ಔಟ್ ಡೋರ್ ಫ್ಯಾಶನ್ ಶೋ ಹಮ್ಮಿಕೊಂಡಿರುವುದಕ್ಕೆ ಕಾಶ್ಮೀರದ ರಾಜಕೀಯ ಪಕ್ಷಗಳ ನಾಯಕರು, ಧಾರ್ಮಿಕ ಮುಖಂಡರು ಹಾಗೂ ನಾಗರಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದನ್ನು “ಅಶ್ಲೀಲ” ಎಂದು ಟೀಕಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳನ್ನೂ ಈ ಕಾರ್ಯಕ್ರಮಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ.
ಅರೆ ಬೆತ್ತಲೆ ಉಡುಪುಗಳನ್ನು ತೊಟ್ಟು ಪುರುಷರು-ಮಹಿಳೆಯರು ರಾಂಪ್ ಮೇಲೆ ಹೆಜ್ಜೆ ಹಾಕಿರುವ ಫೋಟೋ, ವಿಡಿಯೋಗಳು ವೈರಲ್ ಆಗುತ್ತಿದ್ದಂತೆಯೇ ಅನೇಕರು ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕಾರ್ಯಕ್ರಮವು ರಾಜ್ಯದ ಸಾಂಸ್ಕೃತಿಕ ಮೌಲ್ಯಗಳನ್ನು ನಾಶ ಮಾಡಿದೆ ಎಂದು ಕಿಡಿಕಾರಿದ್ದಾರೆ.
ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರೂ ಈ ವಿವಾದಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ್ದು, ಸಾರ್ವಜನಿಕರ ಆಕ್ರೋಶ ಮತ್ತು ಆಘಾತ ನನಗೆ ಅರ್ಥವಾಗುತ್ತಿದೆ. ಸ್ಥಳೀಯ ಸೂಕ್ಷ್ಮಗಳನ್ನು ಗಾಳಿಗೆ ತೂರಿ, ಅದರಲ್ಲೂ ರಂಜಾನ್ ಸಮಯದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಘಟನೆ ಕುರಿತಂತೆ 24 ಗಂಟೆಗಳ ಒಳಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಆದೇಶ ನೀಡಿದ್ದೇನೆ. ಅದನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಈ ಕಾರ್ಯಕ್ರಮವನ್ನು Elle India ಫ್ಯಾಶನ್ ಶೋ ಎಂದು ಹೆಸರಿಸಲಾಗಿದ್ದು, ಫ್ಯಾಶನ್ ಡಿಸೈನರ್ ಜೋಡಿ ಶಿವನ್ ಮತ್ತು ನರೇಶ್ ಈ ಪ್ರದರ್ಶನವನ್ನು ಆಯೋಜಿಸಿದ್ದರು. Elle India ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ಫ್ಯಾಶನ್ ಶೋ ಕುರಿತು ಪೋಸ್ಟ್ ಮಾಡಿದ್ದು, “ಶಿವನ್ ಮತ್ತು ನರೇಶ್ ಅವರ ತಂಡವು ಫ್ಯಾಶನ್ ಜಗತ್ತನ್ನು ಅಕ್ಷರಶಃ ಹೊಸ ಎತ್ತರಕ್ಕೆ ಕೊಂಡೊಯ್ದು, ಗುಲ್ಮಾರ್ಗ್‌ನ ಹಿಮಚ್ಛಾದಿತ ಪ್ರದೇಶದಲ್ಲಿ ಅದ್ಭುತ ಪ್ರದರ್ಶನ ನೀಡಿದೆ. ತಮ್ಮ 15ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಾ, ತಮ್ಮ ಅದ್ಭುತ ವಿನ್ಯಾಸಗಳಾದ ಬಿಕಿನಿ, ಕೇಪ್‌ಗಳೊಂದಿಗೆ ಹಿಮಮಯ ವಿನ್ಯಾಸಗಳನ್ನು ಪರಿಚಯಿಸಿದೆ” ಎಂದು ಬರೆದುಕೊಂಡಿದೆ.
ಹುರಿಯತ್ ಮುಖಂಡ ಮಿರ್ವಾಯಿಸ್ ಉಮರ್ ಫಾರೂಕ್ ಈ ಕಾರ್ಯಕ್ರಮವನ್ನು ತೀವ್ರವಾಗಿ ಖಂಡಿಸಿದ್ದು, ರಂಜಾನ್ ಸಮಯದಲ್ಲಿ ಈ ರೀತಿಯ ಫ್ಯಾಶನ್ ಶೋ ಆಯೋಜನೆಯ ಉದ್ದೇಶವೇನು ಎಂದು ಪ್ರಶ್ನಿಸಿದ್ದಾರೆ. “ಇದು ಅಪಮಾನಕಾರಿ! ಪವಿತ್ರ ರಂಜಾನ್ ತಿಂಗಳಲ್ಲಿ ಗುಲ್ಮಾರ್ಗ್‌ನಲ್ಲಿ ಅಶ್ಲೀಲ ಫ್ಯಾಶನ್ ಶೋ ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಚಿತ್ರಗಳು ಮತ್ತು ವೀಡಿಯೋಗಳು ವೈರಲ್ ಆಗಿದೆ. ಸೂಫಿ-ಸಂತ ಸಂಸ್ಕೃತಿ ಹಾಗೂ ಆಧ್ಯಾತ್ಮಿಕ ಪರಂಪರೆಯಿಂದ ಪ್ರಸಿದ್ಧವಾದ ಕಾಶ್ಮೀರದಲ್ಲಿ ಇದನ್ನು ಹೇಗೆ ಸಹಿಸಿಕೊಳ್ಳಬಹುದು? ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು. ಪ್ರವಾಸೋದ್ಯಮ ಪ್ರಚಾರದ ಹೆಸರಿನಲ್ಲಿ ಈ ರೀತಿಯ ಅಶ್ಲೀಲತೆಯನ್ನು ನಾವು ಸಹಿಸುವುದಿಲ್ಲ,” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪೀಪಲ್ಸ್ ಕಾನ್ಫರೆನ್ಸ್ ಮುಖ್ಯಸ್ಥ ಸಜ್ಜದ್ ಲೋನ್ ಕೂಡ ಪ್ರತಿಕ್ರಿಯಿಸಿದ್ದು, “ನಾನು ಪ್ರಗತಿಪರ ಮನಸ್ಥಿತಿಯ ವ್ಯಕ್ತಿಯಾಗಿದ್ದರೂ, ಪರಸ್ಪರ ಗೌರವ ಮತ್ತು ಸಂವೇದನಶೀಲತೆಗೆ ಮಹತ್ವ ನೀಡುತ್ತೇನೆ. ಆದರೆ, ಈ ಕಾರ್ಯಕ್ರಮವನ್ನು ಆಯೋಜಿಸಲು ಇದು ಸೂಕ್ತ ಸಮಯವಲ್ಲ” ಎಂದಿದ್ದಾರೆ.
ಒಟ್ಟಿನಲ್ಲಿ ಕಣಿವೆ ರಾಜ್ಯದಲ್ಲಿ ನಡೆದಿರುವ ಫ್ಯಾಷನ್ ಶೋ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ರಂಜಾನ್ ಪಾವಿತ್ರ್ಯತೆಯನ್ನು ಅನಾದರಿಸಿ ಈ ರೀತಿಯ ಕಾರ್ಯಕ್ರಮ ಆಯೋಜಿಸಲಾಗಿದೆ ಎನ್ನುವುದು ಸ್ಥಳೀಯರ ಆರೋಪವಾಗಿದೆ. ಜನಪ್ರತಿನಿಧಿಗಳು, ಧಾರ್ಮಿಕ ಮುಖಂಡರು, ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸರ್ಕಾರದ ಮುಂದಿನ ಕ್ರಮದತ್ತ ಎಲ್ಲರ ಕಣ್ಣು ನೆಟ್ಟಿದೆ.