ಅಮರಾವತಿ: “ರಾಜ್ಯದಲ್ಲಿ ಯಾರು ಮೂರನೇ ಮಗು ಹೆರುತ್ತಾರೋ, ಅಂಥ ಮಹಿಳೆಯರಿಗೆ 50 ಸಾವಿರ ರೂ. ನಗದು ಪುರಸ್ಕಾರ ನೀಡಲಾಗುವುದು. ಅದರಲ್ಲೂ ಮೂರನೇ ಮಗುವೇನಾದರೂ ಗಂಡಾಗಿದ್ದಲ್ಲಿ, ಒಂದು ಹಸು ಮತ್ತು ಕರುವನ್ನೂ ಉಡುಗೊರೆಯಾಗಿ ನೀಡಲಾಗುವುದು.”
ಇಂಥದ್ದೊಂದು ವಿಚಿತ್ರ ಹಾಗೂ ಆಶ್ಚರ್ಯಕರ ಘೋಷಣೆ ಮಾಡಿರುವುದು ಆಂಧ್ರಪ್ರದೇಶದ(Andhra) ವಿಜಯನಗರಂ ಕ್ಷೇತ್ರದ ಟಿಡಿಪಿ ಸಂಸದ ಕಲಿಸೆಟ್ಟಿ ಅಪ್ಪಲನಾಯ್ಡು.
ಜನಸಂಖ್ಯೆ ಆಧಾರದಲ್ಲಿ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಚರ್ಚೆಯು ತೀವ್ರಗೊಂಡಿರುವಂತೆಯೇ ಇವರ ಈ ಹೇಳಿಕೆ ಮಹತ್ವ ಪಡೆದಿದೆ. ಅಲ್ಲದೇ, ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು ಸರ್ಕಾರವು ರಾಜ್ಯದ ಜನಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಲವು ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸುತ್ತಿದೆ ಎಂಬ ಮಾತುಗಳ ನಡುವೆಯೇ ಟಿಡಿಪಿ ಸಂಸದ ಈ ಘೋಷಣೆ ಮಾಡಿದ್ದಾರೆ.
ಮಹಿಳಾ ದಿನಾಚರಣೆ ಪ್ರಯುಕ್ತ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕಲಿಸೆಟ್ಟಿ ಅವರು, 3ನೇ ಮಗುವಿಗೆ ಜನ್ಮ ನೀಡುವ ತಾಯಂದಿರಿಗೆ 50 ಸಾವಿರ ರೂ.ಗಳನ್ನು ಬಹುಮಾನವಾಗಿ ನೀಡುತ್ತೇನೆ. ಹುಟ್ಟುವ ಮಗು ಗಂಡಾದಲ್ಲಿ, ಒಂದು ಹಸು ಹಾಗೂ ಕರುವನ್ನೂ ಉಡುಗೊರೆಯಾಗಿ ನೀಡುತ್ತೇನೆ. ಈ ಪ್ರೋತ್ಸಾಹಧನ ನೀಡಲು ನನ್ನ ಸಂಬಳದ ಹಣವನ್ನೇ ಬಳಸಿಕೊಳ್ಳುತ್ತೇನೆ ಎಂದು ಘೋಷಿಸಿದ್ದಾರೆ.
ವಿಶೇಷವೆಂದರೆ ಸಂಸದರ ಘೋಷಣೆಯನ್ನು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸೇರಿದಂತೆ ಟಿಡಿಪಿಯ ಹಲವು ನಾಯಕರು ಸ್ವಾಗತಿಸಿದ್ದಾರೆ. ಸಂಸದರ ಘೋಷಣೆಯು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ. ಕೆಲವರು ಈ ಘೋಷಣೆಯನ್ನು ಶ್ಲಾಘಿಸಿದರೆ, ಇನ್ನು ಕೆಲವರು ಜನಸಂಖ್ಯೆಯ ಗಣನೀಯ ಏರಿಕೆ ಮತ್ತು ಲಿಂಗ ತಾರತಮ್ಯದ ಬಗ್ಗೆ ಪ್ರಶ್ನೆಯೆತ್ತಿದ್ದಾರೆ.
ಆಂಧ್ರಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಯುವಜನರ ಸಂಖ್ಯೆ ಇಳಿಮುಖವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಟಿಡಿಪಿ ಸರ್ಕಾರವು ಜನಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ, ಹೆಚ್ಚು ಹೆಚ್ಚು ಮಕ್ಕಳಿಗೆ ಜನ್ಮ ನೀಡುವಂತೆ ರಾಜ್ಯದ ಜನತೆಗೆ ಕರೆ ಕೊಟ್ಟಿದೆ. ರಾಜ್ಯದ ಜನಸಂಖ್ಯಾ ಸವಾಲನ್ನು ಎದುರಿಸುವ ನಿಟ್ಟಿನಲ್ಲಿ ಸಂಸದರ ಈ ಹೇಳಿಕೆ ಮಹತ್ವ ಪಡೆದಿದೆ. ಇತ್ತೀಚೆಗೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೂ ಹೆಚ್ಚು ಮಕ್ಕಳನ್ನು ಮಾಡಿಕೊಳ್ಳುವಂತೆ ಜನರಿಗೆ ಕರೆ ನೀಡಿದ್ದರು.