ಭೋಪಾಲ್: ಬಹುಕೋಟಿ ಅಬಕಾರಿ ಹಗರಣ ಪ್ರಕರಣದಲ್ಲಿ ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಜೈಲುವಾಸ ಅನುಭವಿಸಿದ ಬೆನ್ನಲ್ಲೇ, ಇಂತಹದ್ದೇ ಮತ್ತೊಂದು ಪ್ರಕರಣದಲ್ಲಿ ಛತ್ತೀಸ್ ಗಢ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರಿಗೂ ಸಂಕಷ್ಟ ಎದುರಾಗಿದೆ. ಬಹುಕೋಟಿ ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಭೂಪೇಶ್ ಬಘೇಲ್ ಸೇರಿ ಹಲವರ ನಿವಾಸದ ಮೇಲೆ ಇ.ಡಿ. ಅಧಿಕಾರಿಗಳು ಸೋಮವಾರ ದಾಳಿ ನಡಸಿದ್ದಾರೆ.
ದುರ್ಗ್ ಜಿಲ್ಲೆಯ ಭಿಲಾಯಿ ಪಟ್ಟಣದಲ್ಲಿರುವ ಭೂಪೇಶ್ ಬಘೇಲ್, ಅವರ ಪುತ್ರ ಚೈತನ್ಯ ಬಘೇಲ್ ಸೇರಿ ಸುಮಾರು 14 ಕಡೆ ಇ.ಡಿ ದಾಳಿ ನಡೆಸಿದೆ. ಹಣದ ಅಕ್ರಮ ವರ್ಗಾವಣೆ ಪ್ರಕರಣ (ಪಿಎಂಎಲ್ಎ) ದಾಖಲಿಸಿಕೊಂಡಿರುವ ಇ.ಡಿ ಅಧಿಕಾರಿಗಳು, ದಾಳಿ ನಡೆಸಿ, ಮಹತ್ವದ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಬಘೇಲ್ ಆಕ್ರೋಶ
ಇ.ಡಿ ಅಧಿಕಾರಿಗಳು ದಾಳಿ ನಡೆಸುತ್ತಲೇ ಭೂಪೇಶ್ ಬಘೇಲ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ನನ್ನ ವಿರುದ್ಧ ಏಳು ವರ್ಷಗಳ ಹಿಂದೆ ಸುಳ್ಳು ಕೇಸ್ ಹಾಕಲಾಗಿತ್ತು. ಆದರೆ, ಅದನ್ನು ನ್ಯಾಯಾಲಯವು ರದ್ದುಗೊಳಿಸಿದೆ. ಹಾಗಾಗಿ, ಇ.ಡಿ ಅಧಿಕಾರಿಗಳು ಮತ್ತೊಂದು ನಕಲಿ ಪ್ರಕರಣದಲ್ಲಿ ನನ್ನ ಮನೆ ಮೇಲೆ ದಾಳಿ ನಡೆಸಿದ್ದಾರೆ. ಆದರೆ, ಇಂತಹ ಕ್ರಮಗಳ ಮೂಲಕ ಕಾಂಗ್ರೆಸ್ ಪಕ್ಷವನ್ನು ಕಟ್ಟಿಹಾಕಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ಏನಿದು ಪ್ರಕರಣ?
ಭೂಪೇಶ್ ಬಘೇಲ್ ಅವರು ಮುಖ್ಯಮಂತ್ರಿಯಾಗಿದ್ದಾಗ ಅಬಕಾರಿ ಇಲಾಖೆಯಲ್ಲಿನಡೆದಿದೆ ಎನ್ನಲಾದ ಹಗರಣದ ಕೇಸ್ ಇದಾಗಿದೆ. ಹಲವು ಯೋಜನೆಗಳಲ್ಲಿ ನಡೆದ ಹಗರಣಗಳಿಂದ ರಾಜ್ಯದ ಖಜಾನೆಗೆ 2,161 ಕೋಟಿ ರೂಪಾಯಿ ನಷ್ಟವಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಹಾಗಾಗಿ, ಪ್ರಕರಣದ ಕುರಿತು ಇ.ಡಿ ತನಿಖೆ ನಡೆಸುತ್ತಿದೆ.