ಕೊಪ್ಪಳ: ವಿದೇಶಿ ಮಹಿಳೆ ಸೇರಿದಂತೆ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಈಗ ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಜಿಲ್ಲೆಯ ಗಂಗಾವತಿ ಗ್ರಾಮೀಣ ಠಾಣೆ ಪೊಲೀಸರು ತಲೆಮರೆಸಿಕೊಂಡಿದ್ದ ಇನ್ನೊಬ್ಬ ಆರೋಪಿಯನ್ನು ಇಂದು ತಮಿಳುನಾಡಿನಲ್ಲಿ ಬಂಧಿಸಿ (arrest) ಪೊಲೀಸರು ಕರೆ ತರುತ್ತಿದ್ದಾರೆ. ಆ ಮೂಲಕ ಪ್ರಕರಣದ ಮೂವರೂ ಆರೋಪಿಗಳನ್ನು ಪೊಲೀಸರು ಬಂಧಿಸಿದಂತಾಗಿದೆ.
ಮಲ್ಲೇಶ್(22), ಚೇತನ್ಸಾಯಿ ಸಿಳ್ಳೇಕ್ಯಾತರ್(21) ಮತ್ತು ಮೂರನೇ ಆರೋಪಿ ಸಾಯಿರಾಮ್ ಬಂಧಿತ ಆರೋಪಿಗಳು. ಮಲ್ಲೇಶ್ ಹಾಗೂ ಚೇತನ್ ಸಾಯಿಯನ್ನು ಪೊಲೀಸರು ಶನಿವಾರ ಬಂಧಿಸಿದ್ದರು. ಆದರೆ, ಸಾಯಿರಾಮ್ ತಲೆ ಮರೆಸಿಕೊಂಡಿದ್ದ. ಈಗ ಆತನನ್ನೂ ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ನಗರದಲ್ಲಿ ಸಚಿವ ಶಿವರಾಜ್ ತಂಗಡಗಿ ಪ್ರತಿಕ್ರಿಯಿಸಿದ್ದು, ಈಗಾಗಲೇ ಘಟನೆ ಬಗ್ಗೆ ಮಾಹಿತಿ ಪಡೆದಿದ್ದೇನೆ. ಈ ರೀತಿಯ ಕೃತ್ಯ ರಾಜ್ಯದಲ್ಲಿ ನಡೆಯಬಾರದಿತ್ತು. ಇದು ನನ್ನ ಮನಸಿಗೆ ನೋವು ತಂದಿದೆ. ನಿನ್ನೆ ಇಬ್ಬರನ್ನು ಬಂಧಿಸಲಾಗಿತ್ತು. ಈಗ ಮತ್ತೋರ್ವನ ಬಂಧನವಾಗಿದೆ ಎಂದಿದ್ದಾರೆ.
ಪ್ರವಾಸಿಗರ ರಕ್ಷಣೆಗೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು. ಕ್ಷುಲಕ ವಿಚಾರಕ್ಕೆ ಈ ರೀತಿಯ ಘಟನೆ ಆಗಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆ ಕೊಡಿಸುವ ಕೆಲಸ ಮಾಡುತ್ತೇವೆ. ನಿರ್ಜನ ಪ್ರದೇಶದಲ್ಲಿ ರಾತ್ರಿ ಯಾರೂ ತಿರುಗಾಡಲು ಹೋಗಬಾರದು. ಆ ಪ್ರದೇಶದಲ್ಲಿ ಚಿರತೆ, ಕರಡಿ ಸೇರಿ ಕಾಡು ಪ್ರಾಣಿಗಳ ಉಪಟಳವಿದೆ. ಈ ಬಗ್ಗೆ ಪೂರ್ಣ ತನಿಖೆ ಮಾಡಿಸಲಾಗುತ್ತಿದೆ. ಅನಧಿಕೃತ ರೆಸಾರ್ಟ್ಗಳ ವಿರುದ್ಧ ಎಲ್ಲಾ ರೀತಿಯ ಕ್ರಮಕೈಗೊಳ್ಳುತ್ತೇವೆ ಎಂದಿದ್ದಾರೆ.