ಬೆಂಗಳೂರು: ನಮ್ಮ ಮೆಟ್ರೋದಿಂದ ಟಿಕೆಟ್ ದರ ಏರಿಕೆಯಾಗುತ್ತಿದ್ದಂತೆ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಪ್ರಮಾಣದ ಇಳಿಕೆ ಕಂಡು ಬಂದಿದೆ. ಇದರಿಂದಾಗಿ ನಮ್ಮ ಮೆಟ್ರೋಗೆ ಭಾರೀ ನಷ್ಟವಾಗುತ್ತಿದ್ದು, ಈಗ ಅನ್ಯ ಮಾರ್ಗದತ್ತ ಮುಖ ಮಾಡಿದೆ.
ನಷ್ಟ ಸರಿದೂಗಿಸಲು ಬಿಎಂಟಿಸಿ ಹಾದಿಯನ್ನು ನಮ್ಮ ಮೆಟ್ರೋ ಹಿಡಿದಿದೆ. ಸದ್ಯದಲ್ಲೇ ಬಿಎಂಟಿಸಿಯಂತೆ ಸಂಪೂರ್ಣ ಮೆಟ್ರೋ ರೈಲು ಸುತ್ತ ಬಣ್ಣ ಬಣ್ಣದ ಜಾಹೀರಾತು ಅಂಟಿಕೊಳ್ಳಲಿದೆ. ರೈಡರ್ ಶಿಫ್ ಕೊರತೆಯ ನಷ್ಟ ಸರಿದೂಗಿಸಲು ಈಗ ನಮ್ಮ ಮೆಟ್ರೋ ಜಾಹೀರಾತಿನ ಮೊರೆ ಹೋಗಿದೆ.
ಸದ್ಯದ ಆರ್ಥಿಕ ಪರಿಸ್ಥಿತಿಯಲ್ಲಿ, ಸುಧಾರಣೆಗೆ ಇರುವ ಹಾದಿ ಇದೊಂದೇ ಎಂದು ನಮ್ಮ ಮೆಟ್ರೋ ಜಾಹೀರಾತು ನೆಚ್ಚಿಕೊಳ್ಳಲು ಮುಂದಾಗಿದೆ ಎನ್ನಲಾಗುತ್ತಿದೆ. ಹೀಗಾಗಿ ನಮ್ಮ ಮೆಟ್ರೋ ರೈಲಿನಲ್ಲಿ ಇನ್ನೂ ಮುಂದೆ ಜಾಹೀರಾತು ಅಳವಡಿಕೆ ಮಾಡಲಾಗುತ್ತದೆ. ಮೆಟ್ರೋ ರೈಲಿನ ಒಳಗಡೆ ಹಾಗೂ ಹೊರಗಡೆ ಪೂರ್ತಿ ಜಾಹೀರಾತು ಅಂಟಿಸಲು ನಿರ್ಧರಿಸಲಾಗಿದೆ. ಈ ಮೂಲಕ ನಮ್ಮ ಮೆಟ್ರೋ ವಾರ್ಷಿಕ 30 ಕೋಟಿ ರೂ. ನಿರೀಕ್ಷೆ ಮಾಡಿದೆ. ಆದರೆ, ಟಿಕೆಟ್ ದರ ಕಡಿಮೆ ಮಾಡಲು ಮಾತ್ರ ಮೆಟ್ರೋ ಮುಂದಾಗಿಲ್ಲ. ಆದರೆ, ಜಾಹೀರಾತು ಮೆಟ್ರೋ ಕೈ ಹಿಡಿಯುತ್ತದೆಯೇ? ಕಾಯ್ದು ನೋಡಬೇಕಿದೆ.