ಜೈಪುರ: ಪಾನ್ ಮಸಾಲಾ ಕುರಿತು ಹಾದಿ ತಪ್ಪಿಸುವ ಜಾಹೀರಾತು ನೀಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿ ರಾಜಸ್ಥಾನದ ಜೈಪುರದ ಜಿಲ್ಲಾ ಗ್ರಾಹಕ ವ್ಯಾಜ್ಯ ಇತ್ಯರ್ಥ ಆಯೋಗವು ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವ್‌ಗನ್ ಮತ್ತು ಟೈಗರ್ ಶ್ರಾಫ್ ಅವರಿಗೆ ನೋಟಿಸ್ ಜಾರಿ ಮಾಡಿದೆ ಎಂದು ವರದಿಗಳು ತಿಳಿಸಿವೆ.
JB ಇಂಡಸ್ಟ್ರೀಸ್‌ನ “ಕೇಸರಿ ರುಚಿಯ ಗುಟ್ಕಾ” ಮತ್ತು ಚೀಪಬಹುದಾದ ತಂಬಾಕು ಉತ್ಪನ್ನದ ಜಾಹೀರಾತುಗಳ ಮೇಲೆ ಆಯೋಗವು ನಿಗಾ ಇರಿಸಿದ್ದು, “ಗ್ರಾಹಕರ ಹಾದಿ ತಪ್ಪಿಸಲಾಗುತ್ತಿದೆ” ಎಂಬ ಆರೋಪದ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಿದೆ. ಜಾಹೀರಾತುಗಳಲ್ಲಿ ಕಾಣಿಸಿಕೊಂಡಿರುವ ಬಾಲಿವುಡ್ ನಟರ ಜೊತೆಗೆ ಗುಟ್ಕಾ ತಯಾರಿಕಾ ಕಂಪನಿಯ ಅಧ್ಯಕ್ಷನಿಗೂ ನೋಟಿಸ್ ಜಾರಿ ಮಾಡಲಾಗಿದೆ.
ಜಾಹೀರಾತಿನ ಕುರಿತಾದ ಆರೋಪಗಳಿಗೆ ಸಂಬಂಧಿಸಿ ಶಾರುಖ್ ಖಾನ್ ಅವರಿಗೆ ಮಾರ್ಚ್ 19ರೊಳಗೆ ಸ್ಪಷ್ಟನೆ ನೀಡುವಂತೆ ಆಯೋಗ ಸೂಚನೆ ನೀಡಿದೆ. ಜೊತೆಗೆ, ನೋಟಿಸ್ ತಲುಪಿದ 30 ದಿನಗಳ ಒಳಗಾಗಿ ಪ್ರತಿಕ್ರಿಯೆ ನೀಡುವಂತೆ ನಟರು ಹಾಗೂ ಪಾನ್ ಮಸಾಲಾ ಕಂಪನಿಗೆ ಆದೇಶಿಸಿದೆ.
ದೂರು ನೀಡಿದ್ದು ಯಾರು?
ಗ್ರಾಹಕರ ಹಕ್ಕುಗಳ ಪರ ಹೋರಾಟ ನಡೆಸುತ್ತಿರುವ ಯೋಗೇಂದ್ರ ಸಿಂಗ್ ಬಡಿಯಾಲ್ ಎಂಬವರು ಈ ಕುರಿತಂತೆ ಗ್ರಾಹಕರ ಆಯೋಗಕ್ಕೆ ದೂರು ದಾಖಲಿಸಿದ್ದು, “ಪ್ರತಿ ಕಣದಲ್ಲೂ ಕೇಸರಿ ಅಂಶವಿದೆ” ಎಂಬ ಟ್ಯಾಗ್‌ಲೈನ್ ಭ್ರಾಂತಿಯುತ ಮತ್ತು ಗ್ರಾಹಕರನ್ನು ತಪ್ಪು ದಾರಿಗೆಳೆದಿದೆ ಎಂದು ಆರೋಪಿಸಿದ್ದಾರೆ. ಈ ದೂರು ಕುರಿತು ಗ್ರಾಹಕ ಆಯೋಗದ ಅಧ್ಯಕ್ಷ ಗ್ಯಾರ್ಸಿಲಾಲ್ ಮೀನಾ ಮತ್ತು ಸದಸ್ಯೆ ಹೇಮಲತಾ ಅಗರ್ವಾಲ್ ತಕ್ಷಣವೇ ಕ್ರಮ ಕೈಗೊಂಡು ನಟರು ಹಾಗೂ ಗುಟ್ಕಾ ತಯಾರಿಕಾ ಕಂಪನಿಗೆ ನೋಟಿಸ್ ಕಳುಹಿಸಿದ್ದಾರೆ.
ದೂರಿನಲ್ಲಿ ಏನಿದೆ?
ಯೋಗೇಂದ್ರ ಸಿಂಗ್ ಬಡಿಯಾಲ್ ಅವರು ನೀಡಿರುವ ದೂರಿನ ಅನ್ವಯ, ಈ ಗುಟ್ಕಾ ಉತ್ಪನ್ನದಲ್ಲಿ ವಾಸ್ತವದಲ್ಲಿ ಕೇಸರಿ ಅಂಶವಿಲ್ಲ ಎಂಬುದು ಸಾಬೀತಾಗಿದೆ. ಕೇಸರಿಗೆ ಒಂದು ಕೆ.ಜಿ.ಗೆ ₹4 ಲಕ್ಷ ರೂ. ಮೌಲ್ಯವಿದೆ. ಆದರೆ ಕೇವಲ ₹5ರ ದರದಲ್ಲಿ ಲಭ್ಯವಿರುವ ಗುಟ್ಕಾದಲ್ಲಿ, ದುಬಾರಿ ಬೆಲೆಯ ಕೇಸರಿ ಅಂಶ (ಜೊತೆಗೇ ಅದರ ಪರಿಮಳ) ಇರಲು ಸಾಧ್ಯವೇ ಇಲ್ಲ. ಆದರೂ ಕಣ ಕಣದಲ್ಲಿ ಕೇಸರಿ ಎಂದು ಹೇಳಿ ಕಂಪನಿ ಮತ್ತು ಸೆಲೆಬ್ರಿಟಿಗಳು ಗ್ರಾಹಕರ ಹಾದಿ ತಪ್ಪಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದರ ಜೊತೆಗೆ, ಗುಟ್ಕಾ ಮತ್ತು ಇತರ ತಂಬಾಕು ಉತ್ಪನ್ನಗಳು ಆರೋಗ್ಯಕ್ಕೆ ಹಾನಿಕಾರಕ. ಆದರೂ ಈ ರೀತಿಯ ಜಾಹೀರಾತುಗಳು ಗುಟ್ಕಾ ಸೇವನೆಯನ್ನು ಪ್ರೋತ್ಸಾಹಿಸುತ್ತದೆ ಎಂದೂ ದೂರುದಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಜಾಹೀರಾತುಗಳಲ್ಲಿ ಗುಟ್ಕಾ ಸೇವನೆಯ “ಆಕರ್ಷಕ” ಚಿತ್ರಣವನ್ನು ತೋರಿಸುವ ಮೂಲಕ, ಜನರನ್ನು ದುಷ್ಪರಿಣಾಮಕಾರಿ ಉತ್ಪನ್ನ ಬಳಕೆಗೆ ಪ್ರೇರೇಪಿಸಲಗುತ್ತಿದೆ ಎಂದೂ ಅರ್ಜಿಯಲ್ಲಿ ವಾದಿಸಲಾಗಿದೆ.
ಈ ಕುರಿತು ಜಿಲ್ಲಾ ಗ್ರಾಹಕ ವ್ಯಾಜ್ಯ ಇತ್ಯರ್ಥ ಆಯೋಗವು ಹೆಚ್ಚಿನ ತನಿಖೆ ನಡೆಸಿ, ಜಾಹೀರಾತು ಕಂಪನಿಯ ಪ್ರತಿನಿಧಿಗಳು ಮತ್ತು ಭಾಗವಹಿಸಿದ ನಟರಿಂದ ಸ್ಪಷ್ಟನೆ ಕೇಳಿದೆ ಎಂದು ವರದಿಗಳು ತಿಳಿಸಿವೆ.