ಪ್ಯಾರಿಸ್: ಫ್ಯಾಷನ್ ಎನ್ನುವುದು ನಿರಂತರವಾಗಿ ವಿಕಸನಗೊಳ್ಳುತ್ತಾ ಇರುತ್ತದೆ. ಆದರೆ ಕೆಲವೊಂದು ಸಂದರ್ಭಗಳಲ್ಲಿ ಹುಟ್ಟಿಕೊಳ್ಳುವ ಫ್ಯಾಷನ್ ಟ್ರೆಂಡ್ ವಿಲಕ್ಷಣ ಮತ್ತು ವಿಚಿತ್ರವಾಗಿ ಇರುತ್ತದೆ. ಅದಕ್ಕೆ ಹೊಸ ಸೇರ್ಪಡೆಯೇ ಈಗ ಬಂದಿರುವ “ಒಂದು ಕಾಲಿನ ಜೀನ್ಸ್”(One-legged jeans)!
ಹೌದು, ಫ್ರೆಂಚ್ ಐಷಾರಾಮಿ ಬ್ರ್ಯಾಂಡ್ ಕಾಪರ್ನಿ ಮಾರುಕಟ್ಟೆಗೆ ಬಿಟ್ಟಿರುವ ಈ ಒಂದು ಕಾಲಿನ ಜೀನ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯನ್ನು(Viral News) ಹುಟ್ಟುಹಾಕಿದೆ. ಅಂದ ಹಾಗೆ, ಈ ಅಸಾಂಪ್ರದಾಯಿಕ ವಿನ್ಯಾಸದ ಜೀನ್ಸ್‌ನ ದರ ಎಷ್ಟು ಗೊತ್ತಾ? ಬರೋಬ್ಬರಿ 38,345 ರೂ.($ 440)ಗಳು.
ಹೈ ವೇಸ್ಟ್ ವಿನ್ಯಾಸದ ಈ ಜೀನ್ಸ್‌ಗೆ ಇರುವುದು ಒಂದೇ ಕಾಲು. ಮತ್ತೊಂದು ಬದಿಯಲ್ಲಿ ಇರುವುದು ಶಾರ್ಟ್ಸ್ ಅಷ್ಟೇ. ಕಾಪರ್ನಿ ಡೆನಿಮ್ ಸ್ಟೈಲ್ ಈಗ ಸಾಂಪ್ರದಾಯಿಕ ವಿನ್ಯಾಸವನ್ನು ಬಿಟ್ಟು ಹೊಸ ಆಯಾಮದೆಡೆಗೆ ತೆರಳುತ್ತಿದೆ ಎಂದು ಕಂಪನಿ ಹೇಳಿದೆ.ಫ್ಯಾಷನ್ ಇನ್ ಫ್ಲೂಯೆನ್ಸರ್ ಕ್ರಿಸ್ಟಿ ಸಾರಾ ಅವರು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಅಸಾಂಪ್ರದಾಯಿಕ ಜೀನ್ಸ್ ಅನ್ನು ಧರಿಸಿ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಇದು “ಬಹುಶಃ ಅಂತರ್ಜಾಲದಲ್ಲಿ ಅತ್ಯಂತ ವಿವಾದಾತ್ಮಕ ಜೀನ್ಸ್” ಎಂದೂ ಅವರು ಹೇಳಿದ್ದಾರೆ.
ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಈ ಜೀನ್ಸ್ ಬಗ್ಗೆ ಭಾರೀ ಚರ್ಚೆ ಆರಂಭವಾಗಿದೆ. ಕೆಲವರು, “ಈ ಪ್ಯಾಂಟಲ್ಲಿ ಒಂದು ಕಾಲು ಏಕೆ ನಾಪತ್ತೆಯಾಗಿದೆ” ಎಂದು ಪ್ರಶ್ನಿಸಿದರೆ, ಮತ್ತೆ ಕೆಲವರು “ಯಾರೂ ಇದನ್ನು ಧರಿಸಲ್ಲ” ಎಂದಿದ್ದಾರೆ. ವೀಡಿಯೊ ವೈರಲ್ ಆಗುತ್ತಿದ್ದಂತೆ, ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಅರ್ಧ ಜೀನ್ಸ್, ಅರ್ಧ ಶಾರ್ಟ್ಸ್ ಪ್ಯಾಂಟ್ ಬಗ್ಗೆ ವಿವಿಧ ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
“ಇದು ನಾನು ನೋಡಿದ ಅತ್ಯಂತ ವಿಚಿತ್ರ ಜೀನ್ಸ್” ಎಂದು ಒಬ್ಬರು ಹೇಳಿದರೆ, ಇನ್ನೊಬ್ಬರು ಹೇಳಿದರು: “ವಿನ್ಯಾಸಕರು ಇತ್ತೀಚಿನ ದಿನಗಳಲ್ಲಿ ಹತಾಶರಾಗುತ್ತಿದ್ದಾರೆ ಎನ್ನುವುದಕ್ಕೆ ಇದುವೇ ಸಾಕ್ಷಿ” ಎಂದಿದ್ದಾರೆ. ಮತ್ತೊಬ್ಬರು, “ಇಂಥ ಉಡುಗೆಗಳಿಗೆಂದೇ ಅಂಗವಿಕಲ ಮಾರುಕಟ್ಟೆ ಅಂತ ತೆರೆಯಬೇಕಾದೀತು” ಎಂದಿದ್ದಾರೆ.
ಹಾಗಂತ ಕಾಪರ್ನಿಯು ಅರ್ಧ ಪ್ಯಾಂಟ್ ಅನ್ನು ಪ್ರಾರಂಭಿಸಿದ ಮೊದಲ ಉಡುಗೆ ಕಂಪನಿಯೇನೂ ಅಲ್ಲ. ಬೊಟೆಗಾ ವೆನೆಟಾ ಮತ್ತು ಲೂಯಿ ವಿಟಾನ್ ಕಂಪನಿಗಳು ಕೂಡ ಈ ಹಿಂದೆ ಇಂತಹ ಶೈಲಿಗಳನ್ನು ಪರಿಚಯಿಸಿದ್ದವು. ಸೋಷಿಯಲ್ ಮೀಡಿಯಾ ಟೀಕೆಗಳ ಹೊರತಾಗಿಯೂ, ಒಂದು-ಕಾಲಿನ ಡೆನಿಮ್ ಪ್ಯಾಂಟ್‌ಗಳಿಗೆ ಭಾರೀ ಬೇಡಿಕೆ ವ್ಯಕ್ತವಾಗಿದ್ದು, ಈಗಾಗಲೇ ಸ್ಟಾಕ್ ಗಳು ಸೋಲ್ಡ್ಔಟ್ ಆಗಿವೆಯಂತೆ.