ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್ ಕೇಸ್ ನಲ್ಲಿ ನಟಿ ರನ್ಯಾ ರಾವ್ (Ranya Rao) ಅರೆಸ್ಟ್ ಆಗಿದ್ದು, ತನಿಖೆ ಎದುರಿಸುತ್ತಿದ್ದಾರೆ. ಆದರೆ, ಈ ಮಧ್ಯೆ ಬೆಚ್ಚಿ ಬೀಳಿಸುವ ಸಂಗತಿಗಳು ಹೊರ ಬರುತ್ತಿವೆ.
ನಟಿ ರನ್ಯಾ ದುಬೈನಿಂದ (Dubai) ಚಿನ್ನ ಕಳ್ಳ ಸಾಗಣೆ (gold smuggling case) ಪ್ರಕರಣದಲ್ಲಿ ಅರೆಸ್ಟ್ ಆಗಿದ್ದು, ಡಿಆರ್ಐ ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದು, ಈ ವೇಳೆ ಬಗೆದಷ್ಟು ಹಲವು ಕುತೂಹಲಕಾರಿ ಮಾಹಿತಿ ಹೊರಬರುತ್ತಿವೆ. ಈ ಪ್ರಕರಣದ ಹಿಂದೆ ಪ್ರಭಾವಿ ವ್ಯಕ್ತಿಗಳು ಇರುವ ಶಂಕೆ ವ್ಯಕ್ತವಾಗುತ್ತಿದೆ. ರನ್ಯಾ ರಾವ್ ಗೆ ರಾಜಕೀಯ ನಾಯಕರ ನಂಟು ಇದೆ. ಹೀಗಾಗಿಯೇ ಅವರ ಕಂಪನಿಗೆ ಸರ್ಕಾರದಿಂದ ಬರೋಬ್ಬರಿ 12 ಎಕರೆ ಜಮೀನು ಮಂಜೂರು ಕೂಡ ಆಗಿದೆ.
ಆರೋಪಿತೆ ನಟಿ ರನ್ಯಾ ರಾವ್‌ಗೆ ಹಲವು ರಾಜಕೀಯ ನಾಯಕರ ಜೊತೆ ಸಂಪರ್ಕ ಇದ್ದು, ಕಾಂಗ್ರೆಸ್ ಸರ್ಕಾರದ ಪ್ರಭಾವಿ ರಾಜಕಾರಣಿಯ ಹೆಸರು ಕೂಡ ಇದರಲ್ಲಿ ಕೇಳಿ ಬಂದಿದೆ. ರನ್ಯಾ ರಾವ್ ನಿರ್ದೇಶಕಿಯಾಗಿರುವ ಕಂಪನಿಗೆ ಕರ್ನಾಟಕ ಸರ್ಕಾರದಿಂದ 12 ಎಕರೆ ಜಮೀನು ಮಂಜೂರಾಗಿದೆ. ರನ್ಯಾ ಅವರು ksiroda India private limited ಎಂಬ ಕಂಪನಿ ನಿರ್ದೇಶಕಿಯಾಗಿದ್ದು, ಈ ಕಂಪನಿಗೆ 2023ರಲ್ಲಿ KIADB ಯಿಂದ ಬರೋಬ್ಬರಿ 12 ಎಕರೆ ಜಮೀನು ಮಂಜೂರಾಗಿದೆ. ರನ್ಯಾ ಜೊತೆ ಸಂಪರ್ಕ ಹೊಂದಿರುವ ಆ ರಾಜಕೀಯ ನಾಯಕ ಸಚಿವರಾಗಿದ್ದಾರೆ. ಕಳೆದ ಮೂರು ತಿಂಗಳ ಹಿಂದೆ ಬೆಂಗಳೂರಲ್ಲಿ ರನ್ಯಾ ರಾವ್ ಅದ್ಧೂರಿ ವಿವಾಹ ಕಾರ್ಯಕ್ರಮ ನಡೆದಿತ್ತು. ಆ ಕಾರ್ಯಕ್ರಮದಲ್ಲಿ ಸಚಿವರು ಕೂಡ ಭಾಗಿಯಾಗಿದ್ದರು. ಆದರೆ, ಈಗ ರನ್ಯಾ ಅರೆಸ್ಟ್ ಆಗುತ್ತಿದ್ದಂತೆ ಸಚಿವರು, ಆತಂಕಗೊಂಡಿದ್ದಾರೆ ಎನ್ನಲಾಗುತ್ತಿದೆ.
ರನ್ಯಾ ರಾವ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಡಿಆರ್‌ಐ ಅಧಿಕಾರಿಗಳು ಈ ಪ್ರಕರಣದ ಹಿಂದೆ ಇರುವ ಪ್ರಭಾವಿ ಕೈಗಳ ಜಾಡು ಹಿಡಿದು ತನಿಖೆ ಆರಂಭಿಸಿದ್ದಾರೆ. ಹೀಗಾಗಿ ರನ್ಯಾ ಹಿಂದೆ ಇರುವ ರಾಜಕಾರಣಿಗಳಿಗೂ ಆತಂಕ ಶುರುವಾಗಿದೆ.
ದುಬೈನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮಾ.3ರಂದು ರಾತ್ರಿ ಬಂದಿಳಿದ ರನ್ಯಾರವರನ್ನು ಡಿಆರ್‌ಇ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ನಂತರ ತಪಾಸಣೆಗೊಳಪಡಿಸಿದಾಗ 12 ಕೋಟಿ ರು. ಮೌಲ್ಯದ 14.8 ಕೆ.ಜಿ. ತೂಕದ ಚಿನ್ನದ ಬಿಸ್ಕತ್ತುಗಳು ಪತ್ತೆಯಾಗಿದ್ದವು. ಮನೆ ಮೇಲೆ ದಾಳಿ ನಡೆಸಿ ಡಿಆರ್‌ಐ ಪರಿಶೀಲಿಸಿದಾಗ 2.06 ಕೋಟಿ ಮೌಲ್ಯದ ಚಿನ್ನ ಹಾಗೂ 2.16 ಕೋಟಿ ನಗದು ಪತ್ತೆಯಾಗಿತ್ತು. ಹೀಗಾಗಿ ನಟಿ ರನ್ಯಾರಿಂದ ಒಟ್ಟು 17.16 ಕೋಟಿ ಮೌಲ್ಯದ ವಸ್ತುಗಳು ಪತ್ತೆಯಾಗಿದ್ದವು. ಹೀಗಾಗಿ ಡಿಆರ್ ಐ ಅಧಿಕಾರಿಗಳು ತನಿಖೆ ಮುಂದುವರೆಸಿದ್ದು, ಈ ಪ್ರಕರಣದಲ್ಲಿ ಸಿಬಿಐ ಕೂಡ ಎಂಟ್ರಿ ಕೊಟ್ಟಿದೆ.