ರಾಯಚೂರು: ಅನುಮಾನಾಸ್ಪದ ರೀತಿಯಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿರುವ ಘಟನೆ ನಡೆದಿದೆ.
ನಗರದ ವಾಸವಿನಗರದಲ್ಲಿ (Vasavinagar) ಈ ಘಟನೆ ಬೆಳಕಿಗೆ ಬಂದಿದೆ. ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆಯಾಗಿದ್ದು, ಪತಿ ಕೊಲೆ ಮಾಡಿ ನೇಣು ಹಾಕಿದ್ದಾನೆ ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ.
ಪ್ರಸನ್ನ ಲಕ್ಷ್ಮೀ (35) ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಮಹಿಳೆ. ಇತ್ತೀಚೆಗೆ ಪತಿ ಜಂಬನಗೌಡ ಕುಡಿದು ಬಂದು ಡಿವೋರ್ಸ್‌ಗಾಗಿ ಪೀಡಿಸುತ್ತಿದ್ದ ನ್ನಲಾಗಿದೆ. ಇತ್ತೀಚೆಗಷ್ಟೇ ಈ ಕುಟುಂಬವು ಮನೆ ಬದಲಾಯಿಸಿ ಬಾಡಿಗೆ ಮನೆಯಲ್ಲಿದ್ದರು. ಆದರೆ, ಒಂದು ವಾರದಿಂದ ಜಂಬನಗೌಡ ಕುಟುಂಬದಿಂದ ದೂರ ಉಳಿದಿದ್ದ. ಪತಿ ಕಿರುಕುಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ಶನಿವಾರ ದೂರು ದಾಖಲಿಸಲು ಪ್ರಸನ್ನ ಲಕ್ಷ್ಮೀ ಮುಂದಾಗಿದ್ದರು. ರಾತ್ರಿ ವೇಳೆ ಮಕ್ಕಳು ಹೊರಗಡೆ ಹೋಗಿದ್ದಾಗ ಘಟನೆ ನಡೆದಿದೆ.
ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪ್ರಸನ್ನ ಲಕ್ಷ್ಮೀ ಶವ ಪತ್ತೆಯಾಗಿದ್ದು, ಪತಿ ಜಂಬನಗೌಡ ಪರಾರಿಯಾಗಿದ್ದಾನೆ. ಆತನೇ ಕೊಲೆ ಮಾಡಿ ನೇಣು ಬಿಗಿದಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಕುರಿತು ರಾಯಚೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.