ಅಮೆರಿಕದಲ್ಲಿ ಹಿಂದೂ ದೇವಾಲಯಗಳ ಮೇಲಿನ ದಾಳಿ ಮುಂದುವರಿದಿದ್ದು, ಕ್ಯಾಲಿಫೋರ್ನಿಯಾದ ಚಿನೋ ಹಿಲ್ಸ್‌ನಲ್ಲಿ ಬಿಎಪಿಎಸ್ ಹಿಂದೂ ದೇವಾಲದ ಮೇಲೆ ದುಷ್ಕರ್ಮಿಗಳು ಹಾನಿ ಮಾಡಿದ್ದಾರೆ. ದೇವಾಲಯದ ಗೋಡೆಗಳ ಮೇಲೆ ಹಿಂದೂ ವಿರೋಧಿ ಬರಹಗಳನ್ನು ಬರೆಯಲಾಗಿದ್ದು, ಹಿಂದೂಗಳು ತಮ್ಮ ದೇಶಕ್ಕೆ ಹಿಂತಿರುಗಬೇಕು ಎಂದು ಬೆದರಿಕೆ ಹಾಕಲಾಗಿದೆ.
ಬಿಎಪಿಎಸ್ ಮೂಲಗಳ ಪ್ರಕಾರ, ಚಿನೋ ಹಿಲ್ಸ್‌ನ ಶ್ರೀ ಸ್ವಾಮಿನಾರಾಯಣ ಮಂದಿರವನ್ನು ದುಷ್ಕರ್ಮಿಗಳು ಅಪವಿತ್ರಗೊಳಿಸಿದ್ದಾರೆ. ಈ ಕುರಿತು ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಬಿಎಪಿಎಸ್, ಈ ದಾಳಿ ಖಂಡಿಸಿದೆ. ಆದರೆ, ದ್ವೇಷ ಬೇರು ಬಿಡಲು ಅವಕಾಶ ನೀಡಬಾರದು ಎಂದು ಮನವಿ ಮಾಡಿದೆ.
ದೇವಾಲಯದ ಪಾವಿತ್ರ್ಯ ಹಾಳು ಮಾಡುವ ಈ ಕೃತ್ಯದ ಹೊರತಾಗಿಯೂ, ಹಿಂದೂ ಸಮುದಾಯವು ದ್ವೇಷದ ವಿರುದ್ಧ ದೃಢವಾಗಿ ನಿಲ್ಲಲಿದೆ. ನಾವು ಎಂದಿಗೂ ದ್ವೇಷ ಬೇರೂರಲು ಬಿಡುವುದಿಲ್ಲ. ಶಾಂತಿ ಮತ್ತು ಸಹಾನುಭೂತಿ ಎಂದಿಗೂ ಗೆಲುವು ಸಾಧಿಸಲಿದೆ ಎಂದು ಬಿಎಪಿಎಸ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಈ ದಾಳಿ ಮಾರ್ಚ್ 9 ರಂದು ನಡೆದಿದ್ದು, ದೇವಾಲಯದ ಗೋಡೆಗಳ ಮೇಲೆ ಭಾರತ ವಿರೋಧಿ ಘೋಷಣೆಗಳನ್ನು ಬರೆಯಲಾಗಿದೆ. ಇದಲ್ಲದೇ, ಪ್ರಧಾನಮಂತ್ರಿ ನರೇಂದ್ರ ಮೋದಿಯ ವಿರುದ್ಧವೂ ಅವಹೇಳನಾತ್ಮಕ ಬರಹಗಳನ್ನು ಹಾಕಲಾಗಿದೆ. ದೇವಾಲಯದ ಆವರಣವನ್ನು ಅಪವಿತ್ರಗೊಳಿಸುವ ಪ್ರಯತ್ನವೂ ನಡೆದಿರುವುದಾಗಿ ಮೂಲಗಳು ತಿಳಿಸಿವೆ.
ಈ ಬಗ್ಗೆ ಬಿಎಪಿಎಸ್ ಸಾಮಾಜಿಕ ಮಾಧ್ಯಮದಲ್ಲಿ ಸ್ಪಷ್ಟಪಡಿಸಿ, ಚಿನೋ ಹಿಲ್ಸ್ ಮತ್ತು ದಕ್ಷಿಣ ಕ್ಯಾಲಿಫೋರ್ನಿಯಾದ ಸಮುದಾಯದೊಂದಿಗೆ ನಾವು ಸದಾ ಶಾಂತಿ, ಸಾಮರಸ್ಯಕ್ಕೆ ಬದ್ಧರಾಗಿದ್ದೇವೆ. ನಾವು ಎಂದಿಗೂ ದ್ವೇಷ ಬೇರೂರಲು ಬಿಡುವುದಿಲ್ಲ ಎಂದು ಹೇಳಿದೆ.
ಇದೇ ರೀತಿಯ ಘಟನೆ ಕಳೆದ ವರ್ಷ ಸೆಪ್ಟೆಂಬರ್ 25 ರಂದು ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೋದಲ್ಲಿ ನಡೆದಿತ್ತು, ಅಂದಾಗಲೂ ಸ್ವಾಮಿನಾರಾಯಣ ಮಂದಿರವನ್ನು ಧ್ವಂಸಗೊಳಿಸಲು ಪ್ರಯತ್ನಿಸಲಾಗಿತ್ತು.