ಮುಂಬೈ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ)ಯಿಂದ ಸಾಮಾನ್ಯ ಜನರಿಗೆ ಹೊರೆಯಾಗುತ್ತಿದೆ ಎಂಬ ಟೀಕೆಗಳು ಮೊದಲಿನಿಂದಲೂ ಕೇಳಿಬರುತ್ತಿವೆ. ಜಿಎಸ್ ಟಿ ವಿಷಯದಲ್ಲಿ ಪ್ರತಿಪಕ್ಷಗಳು ಆಗಾಗ ಟೀಕಿಸುತ್ತಲೇ ಇರುತ್ತವೆ. ಇದರ ಬೆನ್ನಲ್ಲೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜಿಎಸ್ ಟಿ (GST) ಇಳಿಕೆ ಕುರಿತು ಮಹತ್ವದ ಘೋಷಣೆ ಮಾಡಿದ್ದಾರೆ.
ಎಕನಾಮಿಕ್ಸ್ ಟೈಮ್ಸ್ ಸುದ್ದಿಸಂಸ್ಥೆಯು ಮುಂಬೈನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಿಎಸ್ ಟಿ ಅಡಿಯಲ್ಲಿರುವ ನಾಲ್ಕು ಸ್ಲ್ಯಾಬ್ ಗಳು ಹಾಗೂ 148 ವಸ್ತುಗಳ ಮೇಲಿನ ತೆರಿಗೆ ಪರಿಷ್ಕರಣೆ ಸಂಬಂಧ ರಚಿಸಿದ್ದ ಸಚಿವರ ಸಮಿತಿ ಸಿದ್ಧಪಡಿಸುತ್ತಿರುವ ವರದಿಯು ಅಂತಿಮ ಹಂತದಲ್ಲಿದೆ. ಶೀಘ್ರವೇ, ಜಿಎಸ್ ಟಿ ದರವು ಮತ್ತಷ್ಟು ಇಳಿಕೆಯಾಗಲಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.
2017ರ ಜುಲೈ 1ರಂದು ಸರಕು ಮತ್ತು ಸೇವಾ ತೆರಿಗೆ ಜಾರಿಗೊಂಡ ವೇಳೆ ಜಿಎಸ್ ಟಿ ವರಮಾನವು ಶೇ 15.8ರಷ್ಟಿತ್ತು. 2023ರಲ್ಲಿ ಶೇ 11.4ಕ್ಕೆ ಇಳಿದಿದೆ. ಕೇಂದ್ರ ಸರ್ಕಾರಕ್ಕೆ ಜಿಎಸ್ ಟಿ ಆದಾಯ ಕಡಿಮೆಯಾಗಿದೆ. ಆದರೂ, ಜನರ ಹಿತ ದೃಷ್ಟಿಯಿಂದ ಶೀಘ್ರವೇ ಜಿಎಸ್ ಟಿ ಸ್ಲ್ಯಾಬ್ ಗಳನ್ನು ಬದಲಾವಣೆ ಮಾಡಲಾಗುತ್ತದೆ ಎಂದು ಹೇಳಿದರು.
ಸಚಿವರ ಸಮಿತಿಯು ಉತ್ತಮವಾಗಿ ಕಾರ್ಯ ನಿರ್ವಹಿಸಿದೆ. ಸಮಿತಿಯು ಜಿಎಸ್ಟಿ ಮಂಡಳಿ ಸಭೆಯಲ್ಲಿ ವರದಿ ಮಂಡಿಸಲಿದೆ. ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಜಿಎಸ್ಟಿ ಮಂಡಳಿಯು ದರ ಸರಳೀಕರಣ ಮತ್ತು ಸ್ಲ್ಯಾಬ್ ಬದಲಾವಣೆಗೆ ಸಂಬಂಧಿಸಿದಂತೆ 2021ರ ಸೆಪ್ಟೆಂಬರ್ನಲ್ಲಿ ಆರು ಸಚಿವರ ಸಮಿತಿ ರಚಿಸಿತ್ತು