ನವದೆಹಲಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ ಬಿಐ) ಸಿಹಿ ಸುದ್ದಿ ನೀಡಿದೆ. ಮಹಿಳಾ ಉದ್ಯಮಿಗಳಿಗೆ ಯಾವುದೇ ಅಡಮಾನ (ಪ್ಲೆಡ್ಜ್) ಇಲ್ಲದೆ, ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ “ಅಸ್ಮಿತಾ” ಎಂಬ ಯೋಜನೆ ಜಾರಿಗೆ ತಂದಿದೆ. ಮಹಿಳಾ ಸಬಲೀಕರಣ, ಅವರು ಕೂಡ ಉದ್ಯಮಗಳಲ್ಲಿ ಯಶಸ್ಸು ಸಾಧಿಸಲಿ ಎಂಬ ಕಾರಣಕ್ಕಾಗಿ ಎಸ್ ಬಿಐ ಹೊಸ ಯೋಜನೆ ಘೋಷಣೆ ಮಾಡಿದೆ.
ಏನಿದು ಅಸ್ಮಿತಾ ಯೋಜನೆ?
ಯಾವುದೇ ಭದ್ರತೆ ಇಲ್ಲದೆ ಕಡಿಮೆ ಬಡ್ಡಿದರದಲ್ಲಿ ಈ ಯೋಜನೆಯ ಮೂಲಕ ಸಾಲ ಸಿಗಲಿದೆ. ಟ್ರಾನ್ಸ್ಯೂನಿಯನ್ ಸಿಬಿಲ್ ವರದಿಯ ಪ್ರಕಾರ ಮಹಿಳೆಯರು ವ್ಯಾಪಾರಕ್ಕಿಂತ ವೈಯಕ್ತಿಕ ಖರ್ಚಿಗೆ ಹೆಚ್ಚು ಸಾಲ ಪಡೆಯುತ್ತಾರೆ. ಇದಕ್ಕೆ ಪರಿಹಾರವಾಗಿ ಎಸ್ ಬಿಐ ಈ ಹೊಸ ಯೋಜನೆ ತಂದಿದೆ. ಡಿಜಿಟಲ್ ಮೂಲಕ ಸುಲಭವಾಗಿ ಸಾಲ ಪಡೆಯಬಹುದು. ಅಡಮಾನ ಇಲ್ಲದೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಸಿಗುವುದರಿಂದ ಹೆಣ್ಣುಮಕ್ಕಳು ಉದ್ಯಮಗಳಲ್ಲಿ ತೊಡಗಲು ಸಾಧ್ಯವಾಗಲಿದೆ ಎಂದು ತಿಳಿದುಬಂದಿದೆ.
ಉದ್ದಿಮೆ ಸ್ಥಾಪನೆಯ ಉದ್ದೇಶಕ್ಕೆ ಸಾಲ ಪಡೆಯುವ ಮಹಿಳೆಯರ ಸಂಖ್ಯೆ ಶೇ 3ರಷ್ಟಿದೆ. ಶೇ 42ರಷ್ಟು ಮಹಿಳೆಯರು ವೈಯಕ್ತಿಕ ಸಾಲ ಮತ್ತು ಗೃಹೋಪಯೋಗಿ ವಸ್ತುಗಳ ಖರೀದಿಗೆ ಸಾಲ ಪಡೆಯುತ್ತಾರೆ. ಶೇ 38ರಷ್ಟು ಮಹಿಳೆಯರು ಚಿನ್ನದ ಮೇಲೆ ಸಾಲ ಪಡೆಯುತ್ತಾರೆ ಎಂದು . ಟ್ರಾನ್ಸ್ಯೂನಿಯನ್ ಸಿಬಿಲ್ ವರದಿ ತಿಳಿಸಿದೆ. ಆದರೆ, ಎಸ್ ಬಿಐ ಯೋಜನೆಯು ಹೆಣ್ಣುಮಕ್ಕಳನ್ನು ಉದ್ಯಮಗಳತ್ತ ಸೆಳೆಯುತ್ತದೆ ಎಂದು ತಿಳಿದುಬಂದಿದೆ.
ಸಾಲ ಪಡೆಯೋದು ಹೇಗೆ?
ಹೊಸ ಯೋಜನೆ ಅನ್ವಯ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳನ್ನು ಮುನ್ನಡೆಸುವ ಮಹಿಳೆಯರಿಗೆ ಸಾಲ ಸೌಲಭ್ಯ ಕಲ್ಪಿಸಲಾಗುತ್ತದೆ. ಡಿಜಿಟಲ್ ಹಾಗೂ ಬ್ಯಾಂಕ್ ನಲ್ಲಿ ಸ್ವಯಂಪ್ರೇರಿತವಾಗಿ ಅರ್ಜಿ ಸಲ್ಲಿಸಿ ಸಾಲ ಪಡೆಯಬಹುದಾಗಿದೆ ಎಂದು ಎಸ್ ಬಿಐ ಅಧ್ಯಕ್ಷ ಸಿ.ಎಸ್. ಶೆಟ್ಟಿ ತಿಳಿಸಿದ್ದಾರೆ. ಸಾಲ ಸೌಲಭ್ಯದ ಜತೆಗೆ ಮಹಿಳೆಯರಿಗಾಗಿಯೇ ‘ನಾರಿ ಶಕ್ತಿ’ ಪ್ಲಾಟಿನಂ ಡೆಬಿಟ್ ಕಾರ್ಡ್ ಕೂಡ ಎಸ್ ಬಿಐ ಬಿಡುಗಡೆ ಮಾಡಿದೆ. ರುಪೇ ಜೊತೆಗೆ ಎಸ್ಬಿಐ ಈ ಕಾರ್ಡ್ ತಂದಿದೆ.