ಅಹಮದಾಬಾದ್:
ಕಾಂಗ್ರೆಸ್‌ನೊಳಗಿರುವ ಕೆಲವು ನಾಯಕರು ಮತ್ತು ಕಾರ್ಯಕರ್ತರು ಬಿಜೆಪಿಗೆ ಕೆಲಸ ಮಾಡುತ್ತಿರುವ ವಿಚಾರ ನಮಗೆ ತಿಳಿದಿದ್ದು, ಮೊದಲು ಅಂಥವರನ್ನು ಜರಡಿಯಾಡಿ, ಪಕ್ಷದಿಂದ ಹೊರದಬ್ಬುವ ಕೆಲಸ ಆಗಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
2 ದಿನಗಳ ಗುಜರಾತ್ ಪ್ರವಾಸದಲ್ಲಿರುವ ಅವರು ಶನಿವಾರ ಅಹಮಾದಾಬ್‌ನಲ್ಲಿ ಪಕ್ಷದ ಕಾರ್ಯಕರ್ತರ ಜತೆಗಿನ ಸಂವಾದದಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿ 2 ಗುಂಪುಗಳಿವೆ. ಆ ಗುಂಪುಗಳನ್ನು ಮೊದಲು ನಾವು ಪ್ರತ್ಯೇಕಿಸಬೇಕು. ಒಂದು ಗುಂಪು ತಮ್ಮ ಹೃದಯದಲ್ಲಿ ಪಕ್ಷದ ಸಿದ್ಧಾಂತವನ್ನು ಹೊತ್ತುಕೊಂಡು ಸಮಾಜ ಸೇವೆಯಲ್ಲಿ ತೊಡಗಿದೆ. ಮತ್ತೊಂದು ಗುಂಪು ಜನರಿಂದ ದೂರ ಇದ್ದುಕೊಂಡು ಬಿಜೆಪಿ ಜತೆ ಕೈಜೋಡಿಸಿಕೊಂಡಿದೆ. ಈ ರೀತಿ ಪಕ್ಷವಿರೋಧಿ ಚಟುವಟಿಕೆ ನಡೆಸುವವರನ್ನು ಪಕ್ಷದಿಂದ ಕಿತ್ತುಹಾಕುವುದು ಸೇರಿದಂತೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದ್ದಾರೆ.
ಇದೇ ವೇಳೆ, ನಾವು ನಮ್ಮ ಜವಾಬ್ದಾರಿಗಳನ್ನು ಪೂರೈಸುವವರೆಗೂ ಗುಜರಾತ್ ಜನತೆಯಲ್ಲಿ ಅಧಿಕಾರ ನೀಡಿ ಎಂದು ಕೇಳಬಾರದು ಎಂದೂ ರಾಹುಲ್ ಹೇಳಿದ್ದಾರೆ. ಜನರ ಬಳಿ ಮತ ಕೇಳುವ ಮುಂಚೆ ಕಾಂಗ್ರೆಸ್ ಪಕ್ಷ ಕಡ್ಡಾಯವಾಗಿ ಕೆಲವು ಜವಾಬ್ದಾರಿಗಳನ್ನು ಪೂರೈಸಬೇಕು ಎಂದು ಒತ್ತಿ ಹೇಳಿದರು. ನಾವು ಕಳೆದ 30 ವರ್ಷಗಳಿಂದ ಇಲ್ಲಿ ಅಧಿಕಾರದಿಂದ ಹೊರಗಿದ್ದೇವೆ. ನಾನು ಇಲ್ಲಿಗೆ ಬಂದಾಗಲೆಲ್ಲ 2007, 2012, 2017, 2022, 2027 ವಿಧಾನಸಭೆ ಚುನಾವಣೆಗಳ ಬಗ್ಗೆ ಚರ್ಚೆಗಳಾಗುತ್ತವೆ. ಆದರೆ, ಎಲ್ಲಿಯವರೆಗೆ ನಾವು ಜವಾಬ್ದಾರಿಗಳನ್ನು ಪೂರೈಸುವುದಿಲ್ಲವೋ ಅಲ್ಲಿಯವರೆಗೆ ನಮ್ಮನ್ನು ಗುಜರಾತ್ ಜನತೆ ಚುನಾವಣೆಯಲ್ಲಿ ಗೆಲ್ಲಲು ಬಿಡಲ್ಲ.
ನಾವು ಇದನ್ನು ಮಾಡಿದ ದಿನ ಗುಜರಾತ್ ಜನತೆ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುತ್ತಾರೆ ಎಂದು ಭರವಸೆ ನೀಡುತ್ತೇನೆ ಎಂದು ಹೇಳಿದರು. ಗಾಂಧೀಜಿ ಮತ್ತು ಗುಜರಾತ್ ಇಲ್ಲದೆ ಕಾಂಗ್ರೆಸ್ ಪಕ್ಷಕ್ಕೆ ದೇಶಕ್ಕೆ ಸ್ವಾತಂತ್ರ್ಯ ಗಳಿಸಿಕೊಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಕೂಡ ರಾಹುಲ್ ಹೇಳಿದ್ದಾರೆ. ರಾಹುಲ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ, ‘ರಾಹುಲ್ ಮತ್ತೊಬ್ಬರನ್ನು ದೂಷಿಸುವುದು ಬಿಟ್ಟು, ಮೊದಲು ಆತ್ಮವಿಮರ್ಶೆ ಮಾಡಿಕೊಳ್ಳಲಿ. ಅವರ ಹೇಳಿಕೆಯು ಆ ಪಕ್ಷದ ಆಂತರಿಕ ದುಸ್ಥಿತಿಗೆ ಸಾಕ್ಷಿ’ ಎಂದಿದೆ.