Rahul Gandhi : ಕಾಂಗ್ರೆಸ್ ಪಕ್ಷದಲ್ಲೇ ಇದ್ದುಕೊಂಡು ಬಿಜೆಪಿ ಪರ ಕೆಲಸ ಮಾಡುವವರನ್ನು ಉಚ್ಛಾಟನೆ ಮಾಡಬೇಕಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಈ ಮೂಲಕ ಪಕ್ಷದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳು ನಡೆಯಬಹುದು ಎಂದು ಹೇಳಿದ್ದಾರೆ.
ತಮ್ಮ ಪಕ್ಷದಲ್ಲಿ ಬಿಜೆಪಿ ಪರ ಕೆಲಸ ಮಾಡುತ್ತಿರುವ ನಾಯಕರನ್ನು ಮತ್ತು ಕಾರ್ಯಕರ್ತರನ್ನು ಗುರುತಿಸಿ ತೆಗೆದುಹಾಕಬೇಕಾದ ಅಗತ್ಯವಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ನೇರವಾಗಿ ಪಕ್ಷದಿಂದ ತೆಗೆದುಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಗಾಂಧಿ ಅವರು ತಮ್ಮ ಎರಡು ದಿನಗಳ ಗುಜರಾತ್ ಭೇಟಿಯ ಎರಡನೇ ದಿನದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ಕಾರ್ಯಕರ್ತರನ್ನು ಎರಡು ಗುಂಪುಗಳಾಗಿ ವಿಭಜಿಸುವ ಕೆಲಸ ನಡೆಯುತ್ತಿದೆ. ಕೆಲವರು ಪಕ್ಷದ ಸಿದ್ಧಾಂತವನ್ನು ಮನಸ್ಸಿನಲ್ಲಿ ಇಟ್ಟು ಜನರೊಂದಿಗೆ ನಿಂತಿರುತ್ತಾರೆ. ಕೆಲವರು ಜನರೊಂದಿಗೆ ಸಂಪರ್ಕ ಸಾಧಿಸದೇ ಕಾಂಗ್ರೆಸ್ನಲ್ಲಿದ್ದು ಬಿಜೆಪಿ ಪರ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
2027ರಲ್ಲಿ ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸುವ ಉದ್ದೇಶದಿಂದ ರಾಹುಲ್ ಈ ಭೇಟಿ ನಿಗದಿ ಮಾಡಿದ್ದಾರೆ. ಸಭೆಯಲ್ಲಿ ಅವರು ಮುಂಬರುವ ದಿನಗಳಲ್ಲಿ ಪಕ್ಷದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳು ಆಗುವುದಾಗಿಯೂ ಸೂಚನೆ ನೀಡಿದರು.
“ಗುಜರಾತ್ ಕಾಂಗ್ರೆಸ್ನಲ್ಲಿ ಕಾರ್ಯಕರ್ತರ ನಡುವೆ ಎರಡು ವಿಧದ ಜನರಿದ್ದಾರೆ. ಕೆಲವರು ಜನರೊಂದಿಗೆ ನಿಷ್ಠೆಯಿಂದ ನಿಂತು ಅವರ ಹಿತಾಸಕ್ತಿಗಾಗಿ ಹೋರಾಡುವವರು. ಅವರು ಕಾಂಗ್ರೆಸ್ ತತ್ವಗಳನ್ನು ಹೃದಯದಲ್ಲಿ ಇಟ್ಟುಕೊಂಡಿರುವವರು. ಮತ್ತೊಂದೆಡೆ, ಜನರೊಂದಿಗೆ ಸಂಪರ್ಕವೇ ಇಲ್ಲದೆ ಇರುವವರು. ಅವರು ಜನರನ್ನು ಗೌರವಿಸುವವರಲ್ಲ ಮತ್ತು ಅರ್ಧ ಭಾಗ ಬಿಜೆಪಿಯವರೊಂದಿಗೆ ಇರುತ್ತಾರೆ,” “ಈ ಎರಡು ಗುಂಪುಗಳ ನಡುವಿನ ಭೇದವನ್ನು ಪ್ರತ್ಯಕ್ಷವಾಗಿ ಗುರುತಿಸಿ, ಕಠಿಣ ಕ್ರಮ ಕೈಗೊಳ್ಳಬೇಕು. ಯಾರಿಗಾದರೂ ಪಕ್ಷದ ಸಿದ್ಧಾಂತದ ಜತೆ ಸಾಗುವ ಇಚ್ಛೆ ಇಲ್ಲದಿದ್ದರೆ, ತಕ್ಷಣವೇ ಹೊರಗೆ ಹೋಗಬೇಕು” ಎಂದು ಅವರು ಸೂಚನೆ ನೀಡಿದ್ದಾರೆ.