ಮುಂಬೈ: ಹಿರಿಯ ನಟ ನಾನಾ ಪಾಟೇಕರ್(Nana Patekar) ವಿರುದ್ಧ ಅವರ ಸಹನಟಿ ತನುಶ್ರೀ ದತ್ತಾ (Tanushree Dutta) ಅವರು 2018ರಲ್ಲಿ ಮಾಡಿದ್ದ ‘ಮೀ ಟೂ'(MeToo) ಆರೋಪಗಳನ್ನು ಪರಿಗಣಿಸಲು ಮುಂಬೈ ನ್ಯಾಯಾಲಯ ಶುಕ್ರವಾರ ನಿರಾಕರಿಸಿದೆ. ದೂರು ಸಲ್ಲಿಸಲು ಇಷ್ಟೊಂದು ವಿಳಂಬವಾಗಿದ್ದು ಏಕೆ ಎಂಬ ಪ್ರಶ್ನೆಗೆ ತನುಶ್ರೀ ಅವರು ಸೂಕ್ತ ಕಾರಣಗಳನ್ನು ನೀಡಿಲ್ಲ. ಹೀಗಾಗಿ ಈ ಅರ್ಜಿಯನ್ನು ಪರಿಗಣಿಸಲಾಗದು ಎಂದು ಕೋರ್ಟ್ ಹೇಳಿದೆ.
2008ರಲ್ಲಿ ‘ಹಾರ್ನ್ ಓಕೆ ಪ್ಲೀಸ್'(Horn Ok Pleasss) ಚಿತ್ರದ ಚಿತ್ರೀಕರಣದ ವೇಳೆ ನಾನಾ ಪಾಟೇಕರ್ ಮತ್ತು ಇತರ ಮೂವರು ತಮಗೆ ಲೈಂಗಿಕ ಕಿರುಕುಳ ನೀಡಿದ್ದರು ಮತ್ತು ಅನುಚಿತವಾಗಿ ವರ್ತಿಸಿದ್ದರು ಎಂದು ತನುಶ್ರೀ ದತ್ತಾ ಅವರು ದೂರು ಸಲ್ಲಿಸಿದ್ದರು. ಈ ಆರೋಪವು ರಾಷ್ಟ್ರೀಯ ಮಟ್ಟದಲ್ಲಿ ಭಾರೀ ಸುದ್ದಿಯಾಗಿತ್ತು.
ಪೊಲೀಸರು 2019 ರಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ತಮ್ಮ ಅಂತಿಮ ವರದಿಯನ್ನು ಸಲ್ಲಿಸಿದ್ದು, ತನಿಖೆಯಲ್ಲಿ ಆರೋಪಿಗಳ ವಿರುದ್ಧ ಯಾವುದೇ ದೋಷಾರೋಪಣೆ ಕಂಡುಬಂದಿಲ್ಲ. ಈ ಎಫ್ಐಆರ್ ಸುಳ್ಳು ಎಂದು ಕಂಡುಬಂದಿದೆ ಎಂದು ಪೊಲೀಸರು ತಮ್ಮ ವರದಿಯಲ್ಲಿ ತಿಳಿಸಿ, ಬಿ-ರಿಪೋರ್ಟ್ ಸಲ್ಲಿಸಿದ್ದರು.
ಈ ವೇಳೆ, ತನುಶ್ರೀ ದತ್ತಾ ಅವರು, ಪೊಲೀಸರ ಬಿ-ರಿಪೋರ್ಟ್ ತಿರಸ್ಕರಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿ, ಹೊಸ ಅರ್ಜಿಯನ್ನು ಸಲ್ಲಿಸಿದ್ದರು. ತಮ್ಮ ದೂರಿನ ಬಗ್ಗೆ ಹೆಚ್ಚಿನ ತನಿಖೆಗೆ ಆದೇಶಿಸುವಂತೆಯೂ ಅವರು ನ್ಯಾಯಾಲಯವನ್ನು ಒತ್ತಾಯಿಸಿದ್ದರು.
“ಮಾರ್ಚ್ 23, 2008ರಂದು ನಡೆದ ಘಟನೆಗೆ ಸಂಬಂಧಿಸಿದಂತೆ ದತ್ತಾ ಅವರು 2018 ರಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 ಮತ್ತು 509 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಅಂದರೆ, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ (ಸಿಆರ್ಪಿಸಿ) ನಿಬಂಧನೆಗಳ ಪ್ರಕಾರ ಎರಡೂ ಅಪರಾಧಗಳಿಗೆ ಸಂಬಂಧಿಸಿ ದೂರು ನೀಡಲು ಮೂರು ವರ್ಷಗಳ ಮಿತಿ ಇರುತ್ತದೆ. ಆದರೆ, ಈ ಪ್ರಕರಣದಲ್ಲಿ 10 ವರ್ಷಗಳ ಬಳಿಕ ದೂರು ಸಲ್ಲಿಸಿಲಾಗಿದೆ. ವಿಳಂಬಕ್ಕೆ ಕಾರಣವನ್ನು ತಿಳಿಸುವಲ್ಲೂ ಪ್ರಾಸಿಕ್ಯೂಷನ್ ಅಥವಾ ದೂರುದಾರರು ವಿಫಲರಾಗಿದ್ದಾರೆ. ಯಾವುದೇ ಸೂಕ್ತ ಕಾರಣವಿಲ್ಲದೆ ಇಷ್ಟು ದೊಡ್ಡ ವಿಳಂಬವನ್ನು ಕ್ಷಮಿಸಿದರೆ ಅದು ಸಮಾನತೆಯ ತತ್ವ ಮತ್ತು ಕಾನೂನಿನ ನಿಜವಾದ ಸ್ಫೂರ್ತಿಗೆ ವಿರುದ್ಧವಾಗಿರುತ್ತದೆ. ಹೀಗಾಗಿ ಈ ಆರೋಪವನ್ನು ಪರಿಗಣಿಸಲಾಗದು” ಎಂದು ಮ್ಯಾಜಿಸ್ಟ್ರೇಟ್ ಹೇಳಿದರು.