ನವದೆಹಲಿ: ಅಂತಾರಾಷ್ಟ್ರೀಯ ಮಹಿಳಾ ದಿನದ(International Women’s Day) ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ‘ನಾರಿ ಶಕ್ತಿ’ಗೆ ವಿಶಿಷ್ಟ ಶೈಲಿಯಲ್ಲಿ ಗೌರವ ಸಲ್ಲಿಸಿದ್ದು, ಶನಿವಾರ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಒಂದು ದಿನದ ಮಟ್ಟಿಗೆ ಮಹಿಳಾ ಸಾಧಕರಿಗೆ ಹಸ್ತಾಂತರಿಸಿದ್ದಾರೆ.
ಚೆಸ್ ಗ್ರ್ಯಾಂಡ್ ಮಾಸ್ಟರ್ ವೈಶಾಲಿ, ಪರಮಾಣು ವಿಜ್ಞಾನಿ ಎಲಿನಾ ಮಿಶ್ರಾ ಮತ್ತು ಬಾಹ್ಯಾಕಾಶ ವಿಜ್ಞಾನಿ ಶಿಲ್ಪಿ ಸೋನಿ ಸೇರಿದಂತೆ ಮಹಿಳಾ ಸಾಧಕರು ಪ್ರಧಾನಿಯವರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ವಹಿಸುತ್ತಿದ್ದು, ಈ ಹೊಣೆಗಾರಿಕೆಯನ್ನು ವಹಿಸಿಕೊಂಡ ಖುಷಿಯನ್ನು ಸರಣಿ ಟ್ವೀಟ್ ಗಳನ್ನು ಪೋಸ್ಟ್ ಮಾಡುವ ಮೂಲಕ ಹಂಚಿಕೊಂಡಿಡಿದ್ದಾರೆ.
ಹಲವಾರು ಮಹಿಳಾ ಕೇಂದ್ರಿತ ಉಪಕ್ರಮಗಳು ಮತ್ತು ಯೋಜನೆಗಳ ಮೂಲಕ ಮಹಿಳಾ ಸಬಲೀಕರಣಕ್ಕೆ ತಮ್ಮ ಸರ್ಕಾರ ಬದ್ಧವಾಗಿರುವುದನ್ನು ಪುನರುಚ್ಚರಿಸುವಂತಹ ಸಣ್ಣ ವಿಡಿಯೋ ತುಣುಕನ್ನು ಪ್ರಧಾನಿ ಮೋದಿ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ.
“ಮಹಿಳಾ ದಿನದಂತೆ #WomensDay ನಾವು ನಮ್ಮ ನಾರಿ ಶಕ್ತಿಗೆ ನಮಿಸುತ್ತೇವೆ! ನಮ್ಮ ಸರ್ಕಾರ ಸದಾ ಮಹಿಳೆಯರ ಸಬಲೀಕರಣಕ್ಕಾಗಿ ಕೆಲಸ ಮಾಡಿದೆ. ನಮ್ಮ ಯೋಜನೆಗಳು ಮತ್ತು ಕಾರ್ಯಕ್ರಮಗಳೇ ಇದಕ್ಕೆ ಸಾಕ್ಷಿ. ನಾನು ಮೊದಲೇ ಹೇಳಿದಂತೆ ಇಂದು, ನನ್ನ ಸಾಮಾಜಿಕ ಮಾಧ್ಯಮ ಖಾತೆಗಳನ್ನು ವಿವಿಧ ಕ್ಷೇತ್ರಗಳಲ್ಲಿ ಛಾಪು ಮೂಡಿಸುತ್ತಿರುವ ಮಹಿಳೆಯರ ವಶಕ್ಕೆ ಒಪ್ಪಿಸುತ್ತಿದ್ದೇನೆ ” ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಚೆಸ್ ಗ್ರ್ಯಾಂಡ್ ಮಾಸ್ಟರ್ ವೈಶಾಲಿ ಅವರು, ಪ್ರಧಾನಿ ಮೋದಿಯವರ ಸಾಮಾಜಿಕ ಖಾತೆಯ ನಿರ್ವಹಣೆ ವಹಿಸಿಕೊಂಡ ಮಹಿಳಾ ಸಾಧಕರಲ್ಲಿ ಮೊದಲಿಗರಾಗಿದ್ದಾರೆ. ಚೆಸ್ ಪ್ರತಿಭೆ ರಮೇಶ್ ಬಾಬು ಪ್ರಜ್ಞಾನಂದ ಅವರ ಹಿರಿಯ ಸಹೋದರಿಯಾಗಿರುವ ವೈಶಾಲಿ ಮಹಿಳಾ ಗ್ರ್ಯಾಂಡ್ ಸ್ವಿಸ್ ಟೂರ್ನಮೆಂಟ್ 2023 ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
“ನಾನು ವೈಶಾಲಿ. ನಮ್ಮ ಪ್ರಧಾನಿ ನರೇಂದ್ರ ಮೋದಿ ಜಿ ಅವರ ಸಾಮಾಜಿಕ ಜಾಲತಾಣ ಖಾತೆಯನ್ನು ನಿಭಾಯಿಸುತ್ತಿರುವುದು, ಅದರಲ್ಲೂ ವಿಶೇಷವಾಗಿ ಮಹಿಳಾ ದಿನದಂದು #WomensDay ಈ ಅವಕಾಶ ಸಿಕ್ಕಿರುವುದು ನನಗೆ ಥ್ರಿಲ್ ನೀಡಿದೆ. ನಿಮ್ಮಲ್ಲಿ ಅನೇಕರಿಗೆ ತಿಳಿದಿರುವಂತೆ, ನಾನು ಚೆಸ್ ಆಟಗಾರ್ತಿ. ಹಲವು ಪಂದ್ಯಾವಳಿಗಳಲ್ಲಿ ನನ್ನ ಪ್ರೀತಿಯ ದೇಶವನ್ನು ಪ್ರತಿನಿಧಿಸುತ್ತಿರುವುದಕ್ಕೆ ನನಗೆ ತುಂಬಾ ಹೆಮ್ಮೆ ಎನಿಸುತ್ತದೆ” ಎಂದು ಅವರು ಪ್ರಧಾನಿ ಮೋದಿಯವರ ಟ್ವೀಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಇದೇ ವೇಳೆ, ಬದುಕಿನಲ್ಲಿ ಬರುವ ಎಲ್ಲ ಅಡೆತಡೆಗಳನ್ನು ನಿವಾರಿಸುತ್ತಾ ನಿಮ್ಮ ಕನಸುಗಳ ಬೆನ್ನುಹತ್ತಿ ಎಂದು ಅವರು ಮಹಿಳೆಯರಿಗೆ ವಿಶೇಷ ಸಂದೇಶವನ್ನು ನೀಡಿದ್ದಾರೆ. “ನಿಮ್ಮ ಉತ್ಸಾಹವೇ ನಿಮ್ಮ ಯಶಸ್ಸಿಗೆ ಶಕ್ತಿ ನೀಡುತ್ತದೆ” ಎಂದು ಹೇಳಿದ್ದಾರೆ. ಜೊತೆಗೆ, ಹೆಣ್ಣುಮಕ್ಕಳಿಗೆ ಅವರ ಪೋಷಕರು ಮತ್ತು ಒಡಹುಟ್ಟಿದವರು ಬೆಂಬಲಿಸಿ, ಅವರ ಸಾಮರ್ಥ್ಯಗಳನ್ನು ನಂಬಬೇಕು ಎಂದೂ ಮನವಿ ಮಾಡಿದ್ದಾರೆ.
ಎಲಿನಾ ಮಿಶ್ರಾ ಮತ್ತು ಶಿಲ್ಪಿ ಸೋನಿ
ಪರಮಾಣು ವಿಜ್ಞಾನಿ ಎಲಿನಾ ಮಿಶ್ರಾ ಮತ್ತು ಬಾಹ್ಯಾಕಾಶ ವಿಜ್ಞಾನಿ ಶಿಲ್ಪಿ ಸೋನಿ ಅವರೂ ಪ್ರಧಾನಿ ಮೋದಿಯವರ ಖಾತೆಯನ್ನು ವಹಿಸಿಕೊಂಡಿದ್ದಾರೆ. ಈ ಜವಾಬ್ದಾರಿಯನ್ನು ನಿಭಾಯಿಸುವ ಉತ್ಸಾಹ ಮತ್ತು ಅವರ ಜೀವನದ ಒಳನೋಟಗಳ ಬಗ್ಗೆ ಸರಣಿ ಪೋಸ್ಟ್ ಗಳನ್ನು ಹಂಚಿಕೊಂಡಿದ್ದಾರೆ.
“ಭಾರತವು ವಿಜ್ಞಾನಕ್ಕೆ ಅತ್ಯಂತ ರೋಮಾಂಚಕ ಸ್ಥಳವಾಗಿದ್ದು, ಈ ಕ್ಷೇತ್ರಕ್ಕೆ ಅತಿ ಹೆಚ್ಚು ಮಹತ್ವವನ್ನೂ ನೀಡುತ್ತಿದೆ. ಆದ್ದರಿಂದ, ಹೆಚ್ಚು ಹೆಚ್ಚು ಮಹಿಳೆಯರು ಈ ಕ್ಷೇತ್ರಕ್ಕೆ ಪ್ರವೇಶ ಪಡೆಯಬೇಕೆಂದು ನಾವು ಮನವಿ ಮಾಡುತ್ತೇವೆ- ಇದು ನಮ್ಮ ಸಂದೇಶ” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇವರಲ್ಲದೇ, ಬಿಹಾರದ ನಳಂದಾ ಜಿಲ್ಲೆಯವರಾದ ಮಹಿಳಾ ಉದ್ಯಮಿ ಅನಿತಾ ದೇವಿ, ಫ್ರಂಟಿಯರ್ ಮಾರ್ಕೆಟ್ಸ್ ಸ್ಥಾಪಕ ಮತ್ತು ಸಿಇಒ ಅಜೈತಾ ಶಾ, ಖ್ಯಾತ ವಕೀಲೆ ಅಂಜಲಿ ಅಗರ್ವಾಲ್ ಕೂಡ ಪ್ರಧಾನಿ ಮೋದಿ ಖಾತೆಯನ್ನು ನಿರ್ವಹಿಸುತ್ತಿದ್ದು, ಸರಣಿ ಟ್ವೀಟ್ ಗಳನ್ನು ಮಾಡಿದ್ದಾರೆ.