ಲಕ್ನೋ: ಜಗತ್ತಿನಲ್ಲಿ ಪತ್ನಿಗೆ ಹೆದರದ ಪತಿಯೇ ಇಲ್ಲ ಎಂಬುದು ತಮಾಷೆಯ ಮಾತಾದರೂ, ಬಹುತೇಕ ಗಂಡಸರು ಪತ್ನಿಗೆ ಹೆದರುತ್ತಾರೆ. ಆದರೆ, ಇಲ್ಲೊಬ್ಬ ಪೊಲೀಸ್ ಅಧಿಕಾರಿಗೆ ಕನಸಲ್ಲೂ ಹೆಂಡತಿ ಬಂದು ತೊಂದರೆ ಕೊಡುತ್ತಿದ್ದಾಳಂತೆ. ಇದೇ ಕಾರಣದಿಂದಾಗಿ ಅವರು ಸರಿಯಾದ ಸಮಯಕ್ಕೆ ಆಫೀಸಿಗೆ ಹೋಗಲು, ಸರಿಯಾಗಿ ಕೆಲಸ ಮಾಡಲು ಆಗುತ್ತಿಲ್ಲ ಎಂಬುದಾಗಿ ಅಳಲು ತೋಡಿಕೊಂಡಿದ್ದಾರೆ.
ಹೌದು, ಉತ್ತರಪ್ರದೇಶದ ಮೀರತ್ ನಲ್ಲಿರುವ 44ನೇ ಬೆಟಾಲಿಯನ್ ಸಶಸ್ತ್ರ ಪೊಲೀಸ್ ಪಡೆಯ ಪೇದೆಯೊಬ್ಬರು ತಮಗೆ ರಾತ್ರಿ ನಿದ್ರೆಗೆ ಜಾರಿದಾಗ ಕನಸಿನಲ್ಲಿಪತ್ನಿಯು ಕಾಣಿಸಿಕೊಂಡು ರಕ್ತ ಕುಡಿಯುತ್ತಾಳೆ. ಇದರಿಂದ ನೆಮ್ಮದಿಯಾಗಿ ನಿದ್ರಿಸಲಾಗದೆಯೇ ಬೆಳಗ್ಗೆ ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗಲು ಆಗುತ್ತಿಲ್ಲಎಂದು ಕಾರಣ ನೀಡಿದ್ದಾರೆ!
ಇದು ವಿಚಿತ್ರ ಎನಿಸಿದರೂ ಪೇದೆ ಸಚಿಂದ್ರ ಪಟೇಲ್ ಅವರು ತಮಗೆ ಪತ್ನಿಯು ಕನಸಿನಲ್ಲಿ ಬೆದರಿಸುತ್ತಿರುವ ಅನುಭವವನ್ನು ಪತ್ರದಲ್ಲಿಬರೆದು ಉನ್ನತ ಅಧಿಕಾರಿಗಳಿಗೆ ನೀಡಿದ್ದಾರೆ. ಕಳೆದ ಫೆ.17ರಂದು ಬೆಟಾಲಿಯನ್ ಉಸ್ತುವಾರಿ ದಳನಾಯಕ್ ಮಧುಸೂದನ್ ಶರ್ಮಾ ಅವರು ಪೇದೆ ಪಟೇಲ್ ಅವರಿಗೆ ಕರ್ತವ್ಯದಲ್ಲಿನಿರ್ಲಕ್ಷ್ಯದ ಆರೋಪಕ್ಕೆ ಕಾರಣ ನೀಡಲು ನೋಟಿಸ್ ನೀಡಿದ್ದರು.
ಇದಕ್ಕೆ ಕನಸಿನಲ್ಲಿಪತ್ನಿಯ ರೌದ್ರಾವತಾರದ ಸಬೂಬನ್ನು ಪಟೇಲ್ ಪ್ರತಿಕ್ರಿಯೆಯಾಗಿ ನೀಡಿದ್ದಾರೆ.
ಇಷ್ಟೇ ಅಲ್ಲದೇ, ನಿದ್ರಾಹೀನತೆಯಿಂದ ಜೀವನವೇ ಸಾಕಾಗಿದೆ. ತಮಗೆ ದೇವರ ಚರಣ ಸೇರುವ ಇಚ್ಛೆ ಪ್ರಬಲವಾಗಿದೆ ಎಂದು ಪಟೇಲ್ ಹಿರಿಯ ಅಧಿಕಾರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿಪಟೇಲ್ ಅವರ ಪತ್ರವು ವೈರಲ್ ಆಗಿದ್ದು, ಪಟೇಲ್ ಅವರ ಹೇಳಿಕೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.