ಜೆರುಸಲೇಂ: ಯುದ್ಧಪೀಡಿತ ಪ್ಯಾಲೆಸ್ತೀನ್‌ನ(Palestine) ವೆಸ್ಟ್ ಬ್ಯಾಂಕ್‌ನ ಗ್ರಾಮವೊಂದರಲ್ಲಿ ಒತ್ತೆಯಲ್ಲಿದ್ದ (Hostage) ಭಾರತದ 10 ಮಂದಿ ಕಟ್ಟಡ ನಿರ್ಮಾಣ ಕಾರ್ಮಿಕರನ್ನು ಇಸ್ರೇಲ್(Israel) ಸೇನಾ ಪಡೆ ರಕ್ಷಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಈ ಕಾರ್ಮಿಕರು ವಾಸ್ತವದಲ್ಲಿ ನಿರ್ಮಾಣ ಕೈಗಾರಿಕೆಯಲ್ಲಿ ಕೆಲಸ ಮಾಡಲೆಂದು ಇಸ್ರೇಲ್‌ಗೆ ತೆರಳಿದ್ದರು. ಆದರೆ, ಅವರಿಗೆ ಆಮಿಷವೊಡ್ಡಿ ಕೆಲಸಕ್ಕಾಗಿ ವೆಸ್ಟ್ ಬ್ಯಾಂಕ್‌ನ ಗ್ರಾಮವಾದ ಅಲ್-ಝಾಯೇಮ್‌ಗೆ ಕರೆದೊಯ್ಯಲಾಗಿತ್ತು. ನಂತರ ಇವರಲ್ಲಿದ್ದ ಪಾಸ್‌ಪೋರ್ಟ್‌ಗಳನ್ನು ಬಲವಂತವಾಗಿ ಕಿತ್ತುಕೊಳ್ಳಲಾಗಿತ್ತು. ಹೀಗಾಗಿ ಈ ಕಾರ್ಮಿಕರು ವಾಪಸ್ ಬರಲಾಗದೇ ಅತಂತ್ರರಾಗಿದ್ದರು.
ಇತ್ತೀಚೆಗೆ ಇಸ್ರೇಲಿ(Israel) ಪಡೆಗಳು ಚೆಕ್ ಪಾಯಿಂಟ್‌ನಲ್ಲಿ ತಪಾಸಣೆ ವೇಳೆ ಕೆಲವು ಶಂಕಿತರನ್ನು ತಡೆದಿದ್ದು, ಅವರ ವಿಚಾರಣೆ ವೇಳೆ ಭಾರತೀಯ ಕಾರ್ಮಿಕರ ಸ್ಥಿತಿ ಬಗ್ಗೆ ತಿಳಿಯಲು ಸಾಧ್ಯವಾಯಿತು ಎಂದು ಹೇಳಲಾಗಿದೆ. ಅನೇಕ ಪ್ಯಾಲೆಸ್ತೀನಿಯರು ಭಾರತೀಯ ಪಾಸ್‌ಪೋರ್ಟ್‌ಗಳನ್ನು ಬಳಸಿಕೊಂಡು ಚೆಕ್ ಪಾಯಿಂಟ್‌ಗಳನ್ನು ಸುಲಭವಾಗಿ ದಾಟಿ ಇಸ್ರೇಲ್‌ಗೆ ಪ್ರವೇಶ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ಶಂಕಿತರು ಸೆರೆಸಿಕ್ಕ ಬಳಿಕ ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ಮತ್ತು ನ್ಯಾಯಾಂಗ ಸಚಿವಾಲಯ ಹಾಗೂ ಜನಸಂಖ್ಯಾ ಮತ್ತು ವಲಸೆ ಪ್ರಾಧಿಕಾರವು ಜಂಟಿಯಾಗಿ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ, ಕೊನೆಗೆ ಭಾರತೀಯ ಕಾರ್ಮಿಕರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ. ಅವರ ಉದ್ಯೋಗ ಸ್ಥಿತಿ ಹಾಗೂ ಹಿನ್ನೆಲೆಯನ್ನು ದೃಢೀಕರಿಸುವವರೆಗೂ ಅವರು ಅಲ್ಲಿಯೇ ಉಳಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಇಸ್ರೇಲ್(Israel)ನಲ್ಲಿರುವ ಭಾರತೀಯ ರಾಯಭಾರ ಕಚೇರಿ, ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ತಿಳಿಸಿದೆ. ಜೊತೆಗೆ ಭಾರತೀಯ ಕಾರ್ಮಿಕರ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳುವಂತೆ ಇಸ್ರೇಲ್ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದೂ ತಿಳಿಸಿದೆ.
2023 ರ ಅಕ್ಟೋಬರ್ 7 ರಂದು ಹಮಾಸ್ ಉಗ್ರರ ದಾಳಿಯ ನಂತರ ಸಾವಿರಾರು ಪ್ಯಾಲೆಸ್ತೀನ್ (Palestine) ನಿರ್ಮಾಣ ಕಾರ್ಮಿಕರನ್ನು ಇಸ್ರೇಲ್‌ಗೆ ಪ್ರವೇಶಿಸದಂತೆ ನಿರ್ಬಂಧಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಲ್ಲಿ ಭಾರತದಿಂದ ಸುಮಾರು 16,000 ಕಾರ್ಮಿಕರು ನಿರ್ಮಾಣ ಉದ್ಯಮದಲ್ಲಿ ಕೆಲಸ ಮಾಡಲು ಇಸ್ರೇಲ್‌ಗೆ ಹೋಗಿದ್ದಾರೆ ಎಂದು ಹೇಳಲಾಗಿದೆ.