ಚೆನ್ನೈ: ಹಿಂದಿಯೇತರ ಭಾಷಿಕರ ಮೇಲೆ ಕೇಂದ್ರ ಸರ್ಕಾರವು ಹಿಂದಿಯನ್ನು ಹೇರಿಕೆ(Hindi Imposition) ಮಾಡುತ್ತಿದೆ ಎಂಬ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್(Stalin) ಆರೋಪಕ್ಕೆ ತಿರುಗೇಟು ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah), “ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕೋರ್ಸ್‌ಗಳನ್ನು ತಮಿಳಿನಲ್ಲಿ ಪರಿಚಯಿಸಿ” ಎಂದು ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
ಜೊತೆಗೆ, ಈ ನಿಟ್ಟಿನಲ್ಲಿ ಡಿಎಂಕೆ(DMK) ಮುಖ್ಯಸ್ಥ ಸ್ಟಾಲಿನ್ ಏನನ್ನೂ ಮಾಡಿಲ್ಲ. ಆದರೆ, ಪ್ರಾದೇಶಿಕ ಭಾಷೆಗಳಿಗೆ ಅವಕಾಶ ಕಲ್ಪಿಸಬೇಕು ಎಂಬ ಕಾರಣಕ್ಕೆ ನೇಮಕಾತಿ ನೀತಿಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ಸರ್ಕಾರ ಎಂದು ಹೇಳಿದ್ದಾರೆ.
“ಇಲ್ಲಿಯವರೆಗೆ, ಸಿಎಪಿಎಫ್ ನೇಮಕಾತಿಯಲ್ಲಿ ಮಾತೃಭಾಷೆಗೆ ಯಾವುದೇ ಸ್ಥಾನವಿರಲಿಲ್ಲ. ಆದರೆ, ನಮ್ಮ ಯುವಜನರು ಸಿಎಪಿಎಫ್ ಪರೀಕ್ಷೆಯನ್ನು ತಮಿಳು ಸೇರಿದಂತೆ ಎಂಟನೇ ಪರಿಚ್ಛೇದದ ಎಲ್ಲಾ ಭಾಷೆಗಳಲ್ಲಿ ಬರೆಯಲು ಸಾಧ್ಯವಾಗುವಂತೆ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ(Narendra Modi)” ಎಂದು ಅಮಿತ್ ಶಾ ಹೇಳಿದ್ದಾರೆ. “ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕೋರ್ಸ್‌ಗಳ ಪಠ್ಯಕ್ರಮವನ್ನು ಆದಷ್ಟು ಬೇಗ ತಮಿಳು ಭಾಷೆಯಲ್ಲಿ ಪರಿಚಯಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ನಾನು ತಮಿಳುನಾಡು ಮುಖ್ಯಮಂತ್ರಿಯನ್ನು ಒತ್ತಾಯಿಸಲು ಬಯಸುತ್ತೇನೆ” ಎಂದೂ ಸ್ಟಾಲಿನ್‌ಗೆ ತಿವಿದಿದ್ದಾರೆ.
ಭಾಷಾ ಯುದ್ಧ
ರಾಷ್ಟ್ರೀಯ ಶಿಕ್ಷಣ ನೀತಿ (NEP) ಮೂಲಕ ಹಿಂದಿಯನ್ನು ಹೇರಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎನ್ನುವುದು ಸ್ಟಾಲಿನ್ ನೇತೃತ್ವದ ತಮಿಳುನಾಡು ಸರ್ಕಾರದ ಆರೋಪವಾಗಿದೆ. ಬಿಜೆಪಿಯ ಪ್ರಯತ್ನಗಳು ತಮಿಳುನಾಡಿನ ಭಾಷಾ ಅಸ್ಮಿತೆಗೆ ಬೆದರಿಕೆ ಎನ್ನುವುದು ಅವರ ವಾದ. ಈ ವಿಚಾರದಲ್ಲಿ ನಿತ್ಯವೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಸ್ಟಾಲಿನ್, “ಮರವು ಶಾಂತತೆಯನ್ನು ಬಯಸಬಹುದು, ಆದರೆ, ಗಾಳಿಯೇ ಅದಕ್ಕೆ ಅವಕಾಶ ಕೊಡುತ್ತಿಲ್ಲ” ಎಂದು ಆರೋಪಿಸಿದ್ದಾರೆ. ಅಂದರೆ, ಎನ್ಇಪಿ ಜಾರಿಗೊಳಿಸದೇ ಇದ್ದರೆ ರಾಜ್ಯದ ಪಾಲಿನ ಮೊತ್ತವನ್ನು ನೀಡುವುದಿಲ್ಲ ಎನ್ನುವ ಮೂಲಕ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ನಮ್ಮನ್ನು ಪ್ರಚೋದಿಸಿದ್ದಾರೆ ಎಂದಿದ್ದಾರೆ.
“ನಾವು ನಮ್ಮ ಕೆಲಸವನ್ನು ಮಾಡುತ್ತಾ ನಮ್ಮ ಪಾಡಿಗಿದ್ದೆವು. ಈಗ ಈ ರೀತಿ ಸರಣಿ ಪತ್ರಗಳನ್ನು ಬರೆಯುವಂತೆ ನಮಗೆ ಪ್ರಚೋದಿಸಿದ್ದೇ ಕೇಂದ್ರ ಶಿಕ್ಷಣ ಸಚಿವರು. ಅವರು ತಮ್ಮ ಸ್ಥಾನವನ್ನು ಮರೆತು ಹಿಂದಿ ಹೇರಿಕೆಯನ್ನು ಒಪ್ಪಿಕೊಳ್ಳುವಂತೆ ಇಡೀ ರಾಜ್ಯಕ್ಕೆ ಬೆದರಿಕೆ ಹಾಕುವ ಧೈರ್ಯ ಮಾಡಿದರು. ಈಗ ಅವರು ಎಂದೆಂದಿಗೂ ಗೆಲ್ಲಲಾಗದಂಥ ಯುದ್ಧವನ್ನು ಪುನಾರಂಭಿಸಿದರ ಪರಿಣಾಮವನ್ನು ಎದುರಿಸುತ್ತಿದ್ದಾರೆ. ನೀವು ಎಷ್ಟೇ ಬ್ಲ್ಯಾಕ್ ಮೇಲ್ ಮಾಡಿದರೂ ತಮಿಳುನಾಡು ನಿಮಗೆ ಎಂದಿಗೂ ಶರಣಾಗದು” ಎಂದು ಸ್ಟಾಲಿನ್ ಖಡಕ್ಕಾಗಿ ಹೇಳಿದ್ದಾರೆ. ಅಲ್ಲದೇ, 2030ರ ವೇಳೆಗೆ ಸಾಧಿಸಬೇಕು ಎಂದು ಎನ್ಇಪಿ ಹಾಕಿಕೊಂಡಿರುವ ಗುರಿಯನ್ನು ತಮಿಳುನಾಡು ಈಗಾಗಲೇ ಸಾಧಿಸಿಯಾಗಿದೆ ಎಂದಿದ್ದಾರೆ.
“ಇದೊಂದು ರೀತಿ ಪಿಎಚ್‌ಡಿ ಪದವೀಧರರಿಗೆ ಎಲ್‌ಕೆಜಿ ವಿದ್ಯಾರ್ಥಿ ಉಪನ್ಯಾಸ ನೀಡಿದಂತಿದೆ. ದ್ರಾವಿಡರು ಯಾವತ್ತೂ ದೆಹಲಿಯಿಂದ ಆದೇಶಗಳಿಗೆ ತಲೆಬಾಗುವುದಿಲ್ಲ. ಬದಲಾಗಿ, ಅವರು ದೇಶವೇ ಅನುಸರಿಸುವಂತಹ ಹಾದಿಯನ್ನು ಹಾಕಿಕೊಡುತ್ತಾರೆ” ಎಂದೂ ಅವರು ಹೇಳಿದ್ದಾರೆ.
ಎನ್ಇಪಿ(NEP) ಮತ್ತು ತ್ರಿಭಾಷಾ ಸೂತ್ರವನ್ನು ಬೆಂಬಲಿಸುವ ಬಿಜೆಪಿಯ ಇತ್ತೀಚಿನ ಸಹಿ ಅಭಿಯಾನದ ಕುರಿತೂ ಮಾತನಾಡಿರುವ ಸ್ಟಾಲಿನ್, “ಈಗ ತ್ರಿಭಾಷಾ ಸೂತ್ರಕ್ಕಾಗಿ ಬಿಜೆಪಿಯ ಸರ್ಕಸ್ ಮಾದರಿ ಸಹಿ ಸಂಗ್ರಹ ಅಭಿಯಾನದ ಬಗ್ಗೆ ಈಗ ಇಡೀ ತಮಿಳುನಾಡು ನಗುತ್ತಿದೆ. 2026ರ ವಿಧಾನಸಭಾ ಚುನಾವಣೆಯಲ್ಲಿ ಇದನ್ನೇ ನಿಮ್ಮ ಪ್ರಮುಖ ಕಾರ್ಯಸೂಚಿಯನ್ನಾಗಿ ಮಾಡಿ ಎಂದು ನಾನು ನಿಮಗೆ ಸವಾಲು ಹಾಕುತ್ತೇನೆ. ಅದು ಹಿಂದಿ ಹೇರಿಕೆಯ ಬಗ್ಗೆ ಜನಾಭಿಪ್ರಾಯವಾಗಲಿ ನೋಡೋಣ” ಎಂದು ಸ್ಟಾಲಿನ್ ಹೇಳಿದ್ದಾರೆ.
“ಇತಿಹಾಸ ಸ್ಪಷ್ಟವಾಗಿದೆ. ತಮಿಳುನಾಡಿನ ಮೇಲೆ ಹಿಂದಿ ಹೇರಲು ಪ್ರಯತ್ನಿಸಿದವರೆಲ್ಲರೂ ಸೋತಿದ್ದಾರೆ ಅಥವಾ ನಂತರ ತಮ್ಮ ನಿಲುವನ್ನು ಬದಲಾಯಿಸಿ ಡಿಎಂಕೆಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ಹಿಂದಿ ವಸಾಹತುಶಾಹಿಯನ್ನು ತಮಿಳುನಾಡು ಸಹಿಸುವುದಿಲ್ಲ. ಯೋಜನೆಗಳು, ಪ್ರಶಸ್ತಿಗಳು ಮತ್ತು ಸರ್ಕಾರಿ ಸಂಸ್ಥೆಗಳ ಹೆಸರಿನಲ್ಲಿ ಕೇಂದ್ರ ಸರ್ಕಾರವು ಹಿಂದಿಯನ್ನು ಅತಿಯಾಗಿ ಬಳಸುತ್ತಿದೆ. ಇದು ಹಿಂದಿಯೇತರ ಭಾಷಿಕರನ್ನು ಉಸಿರುಗಟ್ಟಿಸುತ್ತಿದೆ” ಎಂದು ಅವರು ಆರೋಪಿಸಿದ್ದಾರೆ.
ಇನ್ನೊಂದೆಡೆ, ಸ್ಟಾಲಿನ್ ಹಿಂದಿ ಹೇರಿಕೆಯ ಬಗ್ಗೆ ಸುಳ್ಳು ನಾಟಕವಾಡುತ್ತಿದ್ದಾರೆ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಆರೋಪಿಸಿದ್ದಾರೆ. “ತಿರು ಎಂ.ಕೆ.ಸ್ಟಾಲಿನ್, PuthiyaKalvi.in ಮೂಲಕ ನಮ್ಮ ಆನ್ಲೈನ್ ಸಹಿ ಅಭಿಯಾನವನ್ನು 36 ಗಂಟೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಜನರು ಬೆಂಬಲಿಸಿದ್ದಾರೆ. ನಮ್ಮ ಅಭಿಯಾನಕ್ಕೆ ರಾಜ್ಯಾದ್ಯಂತ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ತಮಿಳುನಾಡು ಮುಖ್ಯಮಂತ್ರಿಯಾಗಿ, ನೀವು ವಿಚಲಿತರಾಗಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ” ಎಂದು ಅಣ್ಣಾಮಲೈ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.