ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025-26ನೇ ಸಾಲಿನ ಬಜೆಟ್ ಮಂಡನೆಗೆ ಕ್ಷಣಗಣನೆ (Karnataka Budget) ಆರಂಭವಾಗಿದೆ. ಸಿದ್ದರಾಮಯ್ಯ ಅವರು 16ನೇ ಬಾರಿಗೆ ಬಜೆಟ್ ಮಂಡಿಸಲಿದ್ದು, ರಾಜ್ಯಾದ್ಯಂತ ನಿರೀಕ್ಷೆಗಳು ಗರಿಗೆದರಿವೆ. ಮೂಲ ಸೌಕರ್ಯ ಯೋಜನೆಗಳಿಂದ ಹಿಡಿದು ಗ್ಯಾರಂಟಿ ಯೋಜನೆಗಳವರೆಗೆ ಸಿಎಂ ಘೋಷಣೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಕೆಲವೇ ಕ್ಷಣಗಳಲ್ಲಿ ಎಲ್ಲವೂ ಗೊತ್ತಾಗಲಿದೆ.
ಅಹಿಂದ ವರ್ಗಕ್ಕೆ ಆದ್ಯತೆ ನೀಡುವ ಸಿದ್ದರಾಮಯ್ಯ ಅವರು, ಬಡವರಿಗೆ, ನಿರ್ಗತಿಕರಿಗೆ, ಹಿಂದುಳಿದವರಿಗೆ, ರೈತರಿಗೆ, ಕೈಗಾರಿಕೊದ್ಯಮಕ್ಕೆ ಏನೆಲ್ಲ ನೀಡಲಿದ್ದಾರೆ ಎಂಬುದರ ಕುರಿತು ನಿರೀಕ್ಷೆಗಳು ಹೆಚ್ಚಾಗಿವೆ. ಇದರ ಜತೆಗೆ, ಒಳಾಡಳಿತ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಇಲಾಖೆ, ಸಣ್ಣ ಕೈಗಾರಿಕಾ, ಇಂಧನಾ ಇಲಾಖೆ, ಲೋಕೋಪಯೋಗಿ ಕಾರ್ಮಿಕ ಇಲಾಖೆಗಳಿಗೂ ಆದ್ಯತೆ ನೀಡುವ ಸಾಧ್ಯತೆ ಇದೆ
ಗ್ಯಾರಂಟಿ ಯೋಜನೆಗಳಿಗೆ ಬೇಕು 53 ಸಾವಿರ ಕೋಟಿ ರೂ.
ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳಿಗೇ 53 ಸಾವಿರ ಕೋಟಿ ರೂ. ಅಗತ್ಯವಿದೆ. ಬಜೆಟ್ ನಲ್ಲಿ ಸಿದ್ದರಾಮಯ್ಯ ಅವರು ಇಷ್ಟೂ ಮೊತ್ತವನ್ನು ಘೋಷಣೆ ಮಾಡಲಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ವಿಶೇಷ ಯೋಜನೆ ಘೋಷಣೆಯನ್ನು ನಿರೀಕ್ಷಿಸಬಹುದು. ನೀರಾವರಿ ಯೋಜನೆಗೆ ಹೆಚ್ಚಿನ ಅನುದಾನ ನೀಡುವ ನಿರೀಕ್ಷೆ ಇದೆ. ಬೆಂಗಳೂರು ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವ ಸಾಧ್ಯತೆ ಹೆಚ್ಚಿವೆ.
4 ಲಕ್ಷ ಕೋಟಿ ರೂ. ಬಜೆಟ್
ಸಿದ್ದರಾಮಯ್ಯ ಅವರು ಈ ಬಾರಿ ಸುಮಾರು 4 ಲಕ್ಷ ಕೋಟಿ ರೂ. ಮೊತ್ತದ ಬಜೆಟ್ ಮಂಡಿಸಲಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ವರ್ಷ ಅವರು 3.71 ಲಕ್ಷ ಕೋಟಿ ರೂ. ಮೊತ್ತದ ಬಜೆಟ್ ಮಂಡಿಸಿದ್ದರು. ಈಗ ಅದನ್ನು ನಾಲ್ಕು ಲಕ್ಷ ಕೋಟಿ ರೂ.ಗೆ ಏರಿಸಲಿದ್ದಾರೆ ಎನ್ನಲಾಗಿದೆ. ಕರ್ನಾಟಕದಲ್ಲೇ ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ಖ್ಯಾತಿ ಸಿದ್ದರಾಮಯ್ಯ ಹೆಸರಲ್ಲಿದೆ. ದೇಶದಲ್ಲೇ ಗುಜರಾತ್ ಹಣಕಾಸು ಸಚಿವರಾಗಿದ್ದಾಗ ವಜುಭಾಯಿ ವಾಲಾ ಅವರು ಹೆಚ್ಚು ಬಜೆಟ್ ಮಂಡಿಸಿದ್ದಾರೆ. ಇವರು 18 ಬಾರಿ ಬಜೆಟ್ ಮಂಡಿಸಿದ ಖ್ಯಾತಿ ಹೊಂದಿದ್ದಾರೆ.