ಬೆಂಗಳೂರು: ವಿಧಾನಸೌಧ ಮತ್ತು ರಾಜಭವನಕ್ಕೆ ಬಿಬಿಎಂಪಿ ನೋಟಿಸ್ ನೀಡಿದೆ.
ತೆರಿಗೆ ಕಟ್ಟದೆ ಬಾಕಿ ಉಳಿಸಿಕೊಂಡಿದ್ದಕ್ಕೆ ರಾಜಭವನ ಮತ್ತು ವಿಧಾನಸೌಧಕ್ಕೆ ನೋಟಿಸ್ ನೀಡಲಾಗಿದೆ. ಅಲ್ಲದೇ, ರಾಜಭವನ, ವಿಧಾನಸೌಧ ಸೇರಿದಂತೆ ಹೆಚ್ಚಿನ ಸರ್ಕಾರಿ ಕಟ್ಟಡಗಳಿಂದ ತೆರಿಗೆ ಬಾಕಿ ಉಳಿದಿದ್ದು ಆ ಎಲ್ಲ ಕಚೇರಿಗಳಿಗೂ ನೋಟಿಸ್ ನೀಡಲಾಗಿದೆ.
ಇಲ್ಲಿಯವರೆಗೆ ತೆರಿಗೆ ಕಟ್ಟದ ಜನ ಸಾಮಾನ್ಯರ ಕಟ್ಟಡಗಳ ವಿರುದ್ಧ ಸಮರ ಸಾರಿದ್ದ ಬಿಬಿಎಂಪಿ, ಈಗ ಸರ್ಕಾರಿ ಕಟ್ಟಡಗಳ ವಿರುದ್ಧ ಸಮರ ಸಾರಿದೆ. ಬಾಕಿ ಇರುವ ಸರ್ಕಾರಿ ಕಟ್ಟಡಗಳ ಬಾಕಿ ವಸೂಲಿಗೆ ಮುಂದಾಗಿದೆ.
ಹೀಗಾಗಿ ಈಗ ಸಾರ್ವಜನಿಕ ವಲಯದಲ್ಲಿ ಆಸ್ತಿ ತೆರಿಗೆ ಕಟ್ಟದ ಸರ್ಕಾರಿ ಇಲಾಖೆ ಕಟ್ಟಡಗಳನ್ನು ಸೀಜ್ ಮಾಡುತ್ತಾ ಬಿಬಿಎಂಪಿ? ಎಂಬ ಪ್ರಶ್ನೆ ಕಾಡುತ್ತಿದೆ. ಸರ್ಕಾರಿ ಇಲಾಖೆಗಳು ಬಿಬಿಎಂಪಿಗೆ ಕೋಟಿ ಕೋಟಿ ಆಸ್ತಿ ತೆರಿಗೆ ಕಟ್ಟದೆ ಬಾಕಿ ಉಳಿಸಿಕೊಂಡಿವೆ. ವಿಕಾಸಸೌಧ ಸೇರಿದಂತೆ ಸರ್ಕಾರಿ ಇಲಾಖೆಗಳೇ ಬಿಬಿಎಂಪಿಗೆ ಆಸ್ತಿ ತೆರಿಗೆ ಕಟ್ಟಿಲ್ಲ. ರಾಜ್ಯಭವನದಿಂದಲೇ ಬಿಬಿಎಂಪಿಗೆ ತೆರಿಗೆ ಬಾಕಿ ಇದೆ. ಬಹುತೇಕ ಸರ್ಕಾರಿ ಕಚೇರಿಗಳು ಕಳೆದ 17 ವರ್ಷಗಳಿಂದಲೂ ಆಸ್ತಿ ತೆರಿಗೆ ಕಟ್ಟಿಲ್ಲ ಎನ್ನಲಾಗಿದೆ.
ಹೀಗಾಗಿ ತೆರಿಗೆ ಬಾಕಿ ಉಳಿಸಿಕೊಂಡ ಸರ್ಕಾರಿ ಇಲಾಖೆ ಮುಖ್ಯಸ್ಥರಿಗೆ ಬಿಬಿಎಂಪಿ ನೋಟಿಸ್ ನೀಡಿದೆ. ಒಟ್ಟು 258 ಸರ್ಕಾರಿ ಕಟ್ಟಡಗಳಿಗೆ ಬಿಬಿಎಂಪಿ ನೋಟಿಸ್ ನೀಡಿದೆ.