ನವದೆಹಲಿ: ಈ ತಿಂಗಳಲ್ಲೇ ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷರ ಘೋಷಣೆಯಾಗಲಿದೆ. ಹೋಳಿ(ಮಾರ್ಚ್ 14) ಹಬ್ಬದ ಬಳಿಕ ಹಾಗೂ ಮಾರ್ಚ್ 21ರ ಒಳಗಾಗಿ ಅಧ್ಯಕ್ಷರು ಯಾರೆಂಬುದು ಬಹಿರಂಗವಾಗಲಿದೆ. ಮಾ.21ರಿಂದ 23ರವರೆಗೆ ಬೆಂಗಳೂರಿನಲ್ಲಿ ಆರ್ಎಸ್ಎಸ್ ಅಖಿಲ ಭಾರತೀಯ ಪ್ರತಿನಿಧಿ ಸಭಾ ನಡೆಯಲಿದ್ದು, ಅದಕ್ಕೂ ಮುನ್ನವೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಹೆಸರನ್ನು ಘೋಷಿಸಲು ಪಕ್ಷ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ವಿಶೇಷವೆಂದರೆ, ಈ ಬಾರಿ ದಕ್ಷಿಣ ಭಾರತದ ವ್ಯಕ್ತಿಗೆ ಈ ಹುದ್ದೆ ದೊರೆಯುವ ಸಾಧ್ಯತೆಯಿದೆ.
ದೆಹಲಿ ಅಸೆಂಬ್ಲಿ ಚುನಾವಣೆಯ ಬಳಿಕ ಬಿಜೆಪಿಯು ಸಾಂಸ್ಥಿಕ ಚುನಾವಣೆ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದು, ಮಾರ್ಚ್ 14ರೊಳಗಾಗಿ ಈ ಪ್ರಕ್ರಿಯೆ ಪೂರ್ಣಗೊಳಿಸುವಂತೆ ರಾಜ್ಯಗಳಿಗೆ ಸೂಚಿಸಲಾಗಿದೆ. ಈಗಾಗಲೇ ಅರುಣಾಚಲ ಪ್ರದೇಶ, ಛತ್ತೀಸ್ಗಢ, ಸಿಕ್ಕಿಂ, ನಾಗಾಲ್ಯಾಂಡ್, ರಾಜಸ್ಥಾನ, ಅಸ್ಸಾಂ, ಚಂಡೀಗಢ, ಗೋವಾ, ಜಮ್ಮು ಕಾಶ್ಮೀರ, ಲಡಾಖ್, ಮೇಘಾಲಯ ಮತ್ತು ಲಕ್ಷದ್ವೀಪಗಳಲ್ಲಿ ಬಿಜೆಪಿ ಸಂಘಟನಾತ್ಮಕ ಚುನಾವಣೆಗಳು ನಡೆದಿವೆ. ಇನ್ನೂ ಕೆಲವು ರಾಜ್ಯಗಳಲ್ಲಿ ಚುನಾವಣೆ ಬಾಕಿಯಿದೆ.
ಯಾರಾಗುತ್ತಾರೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ?
ಬಿಜೆಪಿ ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಭಾರತದತ್ತ ಗಮನ ಕೇಂದ್ರೀಕರಿಸುತ್ತಿದ್ದು, ದಕ್ಷಿಣ ಭಾರತದವರನ್ನೇ ಈ ಬಾರಿ ನೂತನ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಕ ಮಾಡುವ ಸಾಧ್ಯತೆಯಿದೆ ಎಂದು ಒಂದು ಮೂಲಗಳು ತಿಳಿಸಿವೆ. ಆಂಧ್ರಪ್ರದೇಶದ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಜಿ.ಕಿಶನ್ ರೆಡ್ಡಿ ಅವರನ್ನು ಈ ಹುದ್ದೆಗೆ ನೇಮಕ ಮಾಡುವ ಸಂಭವವೂ ಇದೆ ಎನ್ನಲಾಗಿದೆ. ಇವರಲ್ಲದೇ, ಆಂಧ್ರಪ್ರದೇಶದ ದಗ್ಗುಬಾಟಿ ಪುರಂದೇಶ್ವರಿ (ಬಿಜೆಪಿ ರಾಜ್ಯಾಧ್ಯಕ್ಷೆ), ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರಾದ ವನತಿ ಶ್ರೀನಿವಾಸನ್ ಅವರ ಹೆಸರೂ ಕೇಳಿಬರುತ್ತಿದೆ.
ಇದನ್ನೂ ಓದಿ: ಮಹಾಕುಂಭ ಮುಕ್ತಾಯದ ಬಳಿಕ ಪ್ರಧಾನಿ ಮೋದಿ “ಕ್ಷಮಿಸಿ” ಎಂದಿದ್ದೇಕೆ?
ಪ್ರಸಕ್ತ ವರ್ಷದ ಆರಂಭದಲ್ಲಿ ಧರ್ಮೇಂದ್ರ ಪ್ರಧಾನ್, ವಿನೋದ್ ತಾವ್ಡೆ, ಭೂಪೇಂದ್ರ ಯಾದವ್ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ರೇಸ್ ನಲ್ಲಿದ್ದಾರೆ ಎಂದು ಹೇಳಲಾಗಿತ್ತು.