ಬೆಂಗಳೂರು: ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮತ್ತೆ ಉದ್ಧಟತನ ಮೆರೆದಿದೆ. ಗಡಿ ವಿವಾದದ ಉಸ್ತುವಾರಿಗಳನ್ನಾಗಿ ಮಹಾರಾಷ್ಟ್ರ ಸರ್ಕಾರವು ಇಬ್ಬರು ಸಚಿವರನ್ನು ಉಸ್ತುವಾರಿಯನ್ನಾಗಿ ನೇಮಕ ಮಾಡಿದೆ. ಗಡಿ ವಿವಾದ (Belagavi Dispute) ಪ್ರಕರಣದ ವಿಚಾರಣೆಯು ಸುಪ್ರೀಂ ಕೋರ್ಟ್ ನಲ್ಲಿ ನಡೆಯುತ್ತಿರುವುದರ ಹೊರತಾಗಿಯೂ ಮಹಾರಾಷ್ಟ್ರ ಸರ್ಕಾರ ಮತ್ತೆ ಉದ್ಧಟತನದ ಧೋರಣೆ ಅನುಸರಿಸಿದೆ.
ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಸಚಿವ ಚಂದ್ರಕಾಂತ್ ಪಾಟೀಲ್ ಹಾಗೂ ಗಣಿ ಸಚಿವ ಶಂಭುರಾಜ್ ದೇಸಾಯಿ ಅವರನ್ನು ಕರ್ನಾಟಕದ ಜತೆಗಿನ ಗಡಿ ವಿವಾದ ಪ್ರಕರಣದ ವಿರುದ್ಧ ಹೋರಾಡುವ ಮಹಾರಾಷ್ಟ್ರದ ಕಾನೂನು ತಂಡದೊಂದಿಗೆ ಸಮನ್ವಯ ಸಾಧಿಸಲು ಆಯ್ಕೆ ಮಾಡಲಾಗಿದೆ. ಬೆಳಗಾವಿ, ಖಾನಾಪುರ, ನಿಪಾಣಿ, ಕಾರವಾರ, ಬೀದರ್, ಭಾಲ್ಕಿ ಸೇರಿದಂತೆ ಕರ್ನಾಟಕದ ಹೆಚ್ಚಿನ ಸಂಖ್ಯೆಯ ಗಡಿ ಪ್ರದೇಶಗಳನ್ನು ಮಹಾರಾಷ್ಟ್ರದೊಂದಿಗೆ ವಿಲೀನಗೊಳಿಸಬೇಕೆಂದು ಮಹಾರಾಷ್ಟ್ರ ಒತ್ತಾಯವಾಗಿದೆ.
ಕರ್ನಾಟಕದ ಕಾನೂನು ತಜ್ಞರು ಮಹಾರಾಷ್ಟ್ರದ ನಿರ್ಧಾರವನ್ನು ರಾಜಕೀಯ ಪ್ರೇರಿತ ನಡೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾಗಾಗಿ, ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್ ನಲ್ಲಿ ತನ್ನ ಪ್ರಕರಣವನ್ನು ಬಲಪಡಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಕೂಡ ಒತ್ತಾಯಿಸಿದ್ದಾರೆ.
ಮಹಾರಾಷ್ಟ್ರ ಸರ್ಕಾರದ ತೀರ್ಮಾನ ಹಾಗೂ ಕರ್ನಾಟಕ ಸರ್ಕಾರದ ನಿಲುವಿನ ಕುರಿತು ಸುಪ್ರೀಂ ಕೋರ್ಟ್ ವಕೀಲ ಮೋಹನ್ ಕಟರ್ಕಿ ಪ್ರತಿಕ್ರಿಯಿಸಿದ್ದಾರೆ. ಮಹಾರಾಷ್ಟ್ರದ ಈ ನಡೆ ಯಾವುದೇ ರೀತಿಯಲ್ಲಿ ಸಹಾಯ ಮಾಡುವುದಿಲ್ಲ. ಸಚಿವರನ್ನು ನೇಮಿಸುವ ಬದಲು, ಕರ್ನಾಟಕ ಸರ್ಕಾರವು ರಾಜ್ಯದ ಗಡಿ ಪ್ರದೇಶಗಳನ್ನು ಅಭಿವೃದ್ಧಿಪಡಿಸಲು ದೊಡ್ಡ ಅಧಿಕಾರ ಹೊಂದಿರುವ ಪ್ರತ್ಯೇಕ ಇಲಾಖೆಯನ್ನು ಸ್ಥಾಪಿಸಬೇಕು ಎಂದು ಕೂಡ ಸಲಹೆ ನೀಡಿದ್ದಾರೆ.