ಬೆಂಗಳೂರು: ಕೆಲ ದಿನಗಳ ಹಿಂದಷ್ಟೇ ಬೃಹತ್ ಹೂಡಿಕೆದಾರರ ಶೃಂಗಸಭೆ ಆಯೋಸುವಲ್ಲಿ ಯಶಸ್ವಿಯಾಗಿದ್ದ ಕರ್ನಾಟಕವು ಈಗ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದೆ. ವಿದೇಶಿ ನೇರ ಹೂಡಿಕೆ (ಎಫ್ ಡಿ ಐ) ಸೆಳೆಯುವಲ್ಲಿ ಕರ್ನಾಟಕವು ದೇಶದಲ್ಲೇ ಮೂರನೇ ಸ್ಥಾನ ಪಡೆದಿದೆ. ಪ್ರಸಕ್ತ ಹಣಕಾಸು ವರ್ಷದ 9 ತಿಂಗಳಲ್ಲಿ ಕರ್ನಾಟಕವು 39,289 ಕೋಟಿ ರೂಪಾಯಿ ಹೂಡಿಕೆ ಆಕರ್ಷಿಸಿದೆ ಎಂಬುದು ಗಮನಾರ್ಹ ಸಂಗತಿಯಾಗಿದೆ.
ಹೆಚ್ಚು ಹೂಡಿಕೆ ಸೆಳೆಯುವಲ್ಲಿ ಮಹಾರಾಷ್ಟ್ರ ಎಲ್ಲರಿಗಿಂತ ಮುಂದಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ 9 ತಿಂಗಳ ಅವಧಿಯಲ್ಲಿ ಮಹಾರಾಷ್ಟ್ರವು1.45 ಲಕ್ಷ ಕೋಟಿ ರೂಪಾಯಿ ಎಫ್ಡಿಐ ಆಕರ್ಷಿಸಿದೆ. ಗುಜರಾತ್ 48,545 ಕೋಟಿ ರೂ. ಮತ್ತು ಕರ್ನಾಟಕ 39,289 ಕೋಟಿ ರೂ.ಹೂಡಿಕೆ ಸ್ವೀಕರಿಸಿದೆ ಎಂಬುದಾಗಿ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಜೂನ್ ತ್ರೈಮಾಸಿಕದಲ್ಲಿ1.41 ಲಕ್ಷ ಕೋಟಿ ರೂ. ಹಾಗೂ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ1.18 ಲಕ್ಷ ಕೋಟಿ ರೂ. ಹೂಡಿಕೆಯಾಗಿದೆ ಎಂದು ಕೈಗಾರಿಕಾ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (ಡಿಪಿಐಐಟಿ) ತಿಳಿಸಿದೆ. ಕಂಪ್ಯೂಟರ್ ಸಾಫ್ಟ್ವೇರ್, ಹಾರ್ಡ್ವೇರ್, ದೂರಸಂಪರ್ಕ, ಆಟೊ ಮೊಬೈಲ್ ಮತ್ತು ರಾಸಾಯನಿಕ ವಲಯಗಳಲ್ಲಿಒಳ ಹರಿವು ಹೆಚ್ಚಿದೆ.
ಜಾಗತಿಕ ಆರ್ಥಿಕ ಅನಿಶ್ಚಿತ ಸನ್ನಿವೇಶದಿಂದಾಗಿ 2024-25ರ ಹಣಕಾಸು ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ದೇಶದ ವಿದೇಶಿ ನೇರ ಹೂಡಿಕೆಪ್ರಮಾಣ ಶೇ. 5.6ರಷ್ಟು ಕುಸಿದಿದೆ ಎಂದು ಸರ್ಕಾರ ಮಾಹಿತಿ ನೀಡಿದೆ2023-24ರ ಹಣಕಾಸು ವರ್ಷದ ಇದೇ ಅವಧಿಯಲ್ಲಿ 1 ಲಕ್ಷ ಕೋಟಿ ರೂ.ಗೂ ಹೆಚ್ಚು ಹೂಡಿಕೆಯಾಗಿತ್ತು. ಪ್ರಸಕ್ತ ವರ್ಷ ಇದೇ ಅವಧಿಯಲ್ಲಿ 95,198 ಕೋಟಿ ರೂ. ವಿದೇಶಿ ನೇರ ಹೂಡಿಕೆಯಾಗಿದೆ ಎಂದು ತಿಳಿಸಿದೆ.