ಕೋಲ್ಕತಾ : ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಗಾಗಿ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಫ್ರಾಂಚೈಸಿ ತನ್ನ ಹೊಸ ಜರ್ಸಿಯನ್ನು ಅನಾವರಣ ಮಾಡಿದೆ. ಹಿಂದಿನ ಐಪಿಎಲ್ ಋತುವಿಗಿಂತ ಈ ಜರ್ಸಿಯಲ್ಲಿ ಕೆಲವು ಹೊಸ ಬದಲಾವಣೆಗಳನ್ನು ಮಾಡಲಾಗಿದೆ.
ಕೆಕೆಆರ್ನ ಸ್ಟಾರ್ ಕ್ರಿಕೆಟಿಗರಾದ ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ರಮಣ್ದೀಪ್ ಸಿಂಗ್, ವೈಭವ್ ಅರೋರಾ, ಅನುಕುಲ್ ರಾಯ್, ಮನೀಶ್ ಪಾಂಡೆ, ಮಯಾಂಕ್ ಮಾರ್ಕಂಡೆ ಮತ್ತು ಲುವ್ನಿತ್ ಸಿಸೋಡಿಯಾ ಅವರು ಜರ್ಸಿ ಬಿಡುಗಡೆಯ ವೀಡಿಯೊದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೊವನ್ನು ಫ್ರಾಂಚೈಸಿಯ ಸೋಶಿಯಲ್ ಮೀಡಿಯಾ ಅಕೌಂಟ್ನಲ್ಲಿ ಶೇರ್ ಮಾಡಲಾಗಿದೆ.
3 ಸ್ಟಾರ್ಸ್ ಹೊಂದಿರುವ ಹೊಸ ಜರ್ಸಿ
ಜರ್ಸಿಯಲ್ಲಿರುವ ಮೂರ ನಕ್ಷತ್ರಗಳ ಮೂಲಕ ಐಪಿಎಲ್ ಇತಿಹಾಸದಲ್ಲಿ ತನ್ನ ಮೂರು ಪ್ರಶಸ್ತಿಯನ್ನು ತೋರಿಸಲಾಗಿದೆ. ಈ ತಂಡ 2012ರಲ್ಲಿ ತಮ್ಮ ಮೊದಲ ಪ್ರಶಸ್ತಿ ಗೆದ್ದಿತ್ತು. ನಂತರ 2014ರಲ್ಲಿಯೂ ಈ ಸಾಧನೆಯನ್ನು ಪುನರಾವರ್ತಿಸಿತ್ತು. ಈ ಎರಡೂ ಪ್ರಶಸ್ತಿಗಳನ್ನು ಗೌತಮ್ ಗಂಭೀರ್ ನಾಯಕತ್ವದಲ್ಲಿ ಲಭಿಸಿತ್ತು.
2024ರಲ್ಲಿ ಫೈನಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿ ಪ್ರಶಸ್ತಿ ಜಯಿಸಿತ್ತು. ಕುತೂಹಲಕಾರಿ ಸಂಗತಿಯೆಂದರೆ, ಗೌತಮ್ ಗಂಭೀರ್ ಮತ್ತೆ ತಂಡದಲ್ಲಿ ಮೆಂಟರ್ ಆಗಿದ್ದರು ಎಂಬುದೇ ವಿಶೇಷ. ಕೆಕೆಆರ್ ಅಧಿಕೃತ ಜರ್ಸಿ ಬಿಡುಗಡೆ ವೀಡಿಯೊವನ್ನು ಬಿಡುಗಡೆ ಮಾಡಿದೆ. ಅಲ್ಲಿ ತಂಡದ ಅಭಿಮಾನಿಗಳು ‘ನಂಬರ್ 3’ ಎಂದು ಪದೇ ಪದೇ ಹೇಳುವುದನ್ನು ಕಾಣಬಹುದು, ಇದು ಫ್ರಾಂಚೈಸಿ ಇಲ್ಲಿಯವರೆಗೆ ಗೆದ್ದ ಮೂರು ಪ್ರಶಸ್ತಿಗಳ ಪ್ರಶಂಸೆಯಾಗಿದೆ. ಅಭಿಮಾನಿಗಳ ನಿರೀಕ್ಷೆಗಳಿಗೆ ತಕ್ಕಂತೆ ಆಟವನ್ನು ಮುಂದುವರಿಸು ಗುರಿಯನ್ನೂ ಈ ವಿಡಿಯೊದಲ್ಲಿ ವ್ಯಕ್ತಪಡಿಸಲಾಗಿದೆ.
ಗೋಲ್ಡನ್ ಬ್ಯಾಡ್ಜ್ ಏನನ್ನು ಸೂಚಿಸುತ್ತದೆ?
ಜರ್ಸಿಯಲ್ಲಿ ಮೂರು ಸ್ಟಾರ್ ಗಳ ಹೊರತಾಗಿ ತೋಳಿನ ಮೇಲೆ ವಿಶೇಷ ಗೋಲ್ಡನ್ ಐಪಿಎಲ್ ಬ್ಯಾಡ್ಜ್ ಕೂಡ ಇದೆ. ಹಾಲಿ ಚಾಂಪಿಯನ್ ಗಳಾಗಿ ಪಂದ್ಯಾವಳಿಗೆ ಪ್ರವೇಶಿಸುವ ಒಂದು ವಿಶೇಷ ಸಂಕೇತ ಅದಾಗಿದೆ. ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಕೆಕೆಆರ್ ಐಪಿಎಲ್ 2024 ರ ಋತುವಿನಲ್ಲಿ ಚಾಂಪಿಯನ್ ಆಗಿತ್ತು.
ಕ್ಯಾಪ್ಟನ್ ಯಾರು?
ಐಪಿಎಲ್ 2025ರ ಋತುವಿಗೆ ತನ್ನ ನಾಯಕನನ್ನು ಘೋಷಿಸದ ಎರಡು ತಂಡಗಳಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಒಂದಾಗಿದೆ. ಕಳೆದ ಋತುವಿನಲ್ಲಿ ಅವರ ನಾಯಕ ಶ್ರೇಯಸ್ ಅಯ್ಯರ್ ಕಳೆದ ವರ್ಷ ಮೆಗಾ ಹರಾಜಿಗೆ ಹೋಗಲು ಹೊರಗೆ ಬಂದಿದ್ದರು. ಅವರನ್ನು ಪಂಜಾಬ್ ಕಿಂಗ್ಸ್ ದೊಡ್ಡ ಮೊತ್ತಕ್ಕೆ ಖರೀದಿಸಿದೆ.
ಪ್ರಸ್ತುತ, ಅಜಿಂಕ್ಯ ರಹಾನೆ, ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ಸುನಿಲ್ ನರೈನ್ ಮತ್ತು ರೋವ್ಮನ್ ಪೊವೆಲ್ ಕೆಲವು ಆಯ್ಕೆಗಳಾಗಿದ್ದಾರೆ. ಆದರೆ ಹೆಸರನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ. ಮಾರ್ಚ್ 22 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ಆರ್‌ಸಿಬಿ ವಿರುದ್ಧ ಐಪಿಎಲ್ 2025 ರ ಆರಂಭಿಕ ಪಂದ್ಯವನ್ನು ಆಡಲಿದೆ.