ಜೆರುಸಲೇಂ: ಅಕ್ರಮವಾಗಿ ಇಸ್ರೇಲ್‌ಗೆ ಪ್ರವೇಶಿಸಲು ಯತ್ನಿಸುತ್ತಿದ್ದ ಭಾರತೀಯ ಪ್ರಜೆಯೊಬ್ಬರನ್ನು ಜೋರ್ಡಾನ್ ಸೇನಾ ಪಡೆ ಗುಂಡಿಕ್ಕಿ ಹತ್ಯೆಗೈದಿದೆ. ಫೆಬ್ರವರಿ 10ರಂದು ನಡೆದಿದ್ದ ಈ ಘಟನೆಯು ಈಗ ಬೆಳಕಿಗೆ ಬಂದಿದೆ.
ಜೋರ್ಡಾನ್ ಸೈನಿಕರ ಗುಂಡಿಗೆ ಬಲಿಯಾದ ವ್ಯಕ್ತಿಯನ್ನು ಥಾಮಸ್ ಗೇಬ್ರಿಯನ್ ಪಿರೇರಾ ಎಂದು ಗುರುತಿಸಲಾಗಿದೆ. ಇವರು ಕೇರಳ ಥುಂಬಾ ಎಂಬ ಪ್ರದೇಶಕ್ಕೆ ಸೇರಿದವರು.
ಈ ಕುರಿತು ಮಾಹಿತಿ ನೀಡಿರುವ ಜೋರ್ಡಾನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ, ದುರದೃಷ್ಟಕರ ಸನ್ನಿವೇಶದಲ್ಲಿ ಭಾರತೀಯ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಮೃತ ವ್ಯಕ್ತಿಯ ಕುಟುಂಬದೊಂದಿಗೆ ನಮ್ಮ ಕಚೇರಿ ಸಂಪರ್ಕದಲ್ಲಿದೆ. ಥಾಮಸ್ ಅವರ ಮೃತದೇಹವನ್ನು ಭಾರತಕ್ಕೆ ತರುವ ನಿಟ್ಟಿನಲ್ಲಿ ಜೋರ್ಡಾನ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಹೇಳಿದೆ.
ವಿಸಿಟರ್ ವೀಸಾದಲ್ಲಿ ಜೋರ್ಡಾನ್‌ಗೆ ಬಂದಿದ್ದ ಥಾಮಸ್ ಪಿರೇರಾ(47) ಅವರು ಇಸ್ರೇಲ್ ಅನ್ನು ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ್ದರು. ಜೊತೆಗೆ ಇವರ ಸಂಬಂಧಿಯೂ ಆಗಿರುವ ಕೇರಳದ ಮೀನಾಂಕುಳಂ ನಿವಾಸಿ ಎಡಿಸನ್ ಅವರೂ ಇಸ್ರೇಲ್‌ಗೆ ನುಗ್ಗಲು ಯತ್ನಿಸಿದ್ದರು. ಅವರ ಮೇಲೂ ಯೋಧರು ಗುಂಡು ಹಾರಿಸಿದ್ದು, ಅವರು ಯಾವುದೇ ಪ್ರಾಣಾಪಾಯವಿಲ್ಲದೇ ಬಚಾವಾಗಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ಬಳಿಕ ಎಡಿಸನ್‌ರನ್ನು ಭಾರತಕ್ಕೆ ಹಸ್ತಾಂತರ ಮಾಡಲಾಗಿದೆ.
ಇಸ್ರೇಲ್-ಹಮಾಸ್ ಯುದ್ಧದ ಹಿನ್ನೆಲೆಯಲ್ಲಿ ವೆಸ್ಟ್ ಬ್ಯಾಂಕ್‌ನಲ್ಲಿ ಹಿಂಸಾಚಾರ ಹೆಚ್ಚಿರುವಂತೆಯೇ ಈ ಘಟನೆ ನಡೆದಿದೆ.