ನವದೆಹಲಿ: ನಮ್ಮ ದೇಶ ಇರುವುದೇ ಹಾಗೆ. ಇಲ್ಲಿ ಪ್ರತಿಯೊಂದು ವಿಚಾರವೂ ರಾಜಕೀಯದ ವ್ಯಾಪ್ತಿಗೆ ಬರುತ್ತದೆ. ಪ್ರತಿಯೊಂದು ವಿಷಯದಲ್ಲೂ ರಾಜಕೀಯ ಮೇಲಾಟ ನಡೆಯುತ್ತದೆ. ದೇವರು, ಧರ್ಮ, ಆಚಾರ-ವಿಚಾರದಲ್ಲೂ ರಾಜಕೀಯ ಒಳನುಸುಳುತ್ತದೆ. ಇದಕ್ಕೆ ನಿದರ್ಶನ ಎಂಬಂತೆ, ಮಹಾ ಕುಂಭಮೇಳದ ವಿಷಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ (BJP vs Congress) ತೀವ್ರ ಜಟಾಪಟಿ ಏರ್ಪಟ್ಟಿದೆ. ಇದಕ್ಕೆ ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ಅವರೂ ಪ್ರವೇಶ ಮಾಡಿದ್ದಾರೆ.
ಕಾಂಗ್ರೆಸ್ ನಾಯಕರು ರಾಮಮಂದಿರ, ಕುಂಭಮೇಳಕ್ಕೆ ಭೇಟಿ ನೀಡದಿರುವ ಕುರಿತು ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ರಾಹುಲ್ ಗಾಂಧಿ ಸೇರಿ ಅವರ ಕುಟುಂಬಸ್ಥರೆಲ್ಲರೂ ಹಿಂದೂ ವಿರೋಧಿಗಳು. ಅವರು ಅಯೋಧ್ಯೆಯಲ್ಲಿ ಬಾಬರ್ ನಿರ್ಮಿಸಿದ ಮಸೀದದಿಗೆ ತೆರಳಿದರು. ಆದರೆ, ಇದುವರೆಗೆ ರಾಮಮಂದಿರದಲ್ಲಿರುವ ರಾಮಲಲ್ಲಾನ ದರ್ಶನ ಪಡೆದಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಕಾಂಗ್ರೆಸ್ ನಾಯಕರ ರಾಹುಲ್ ಗಾಂಧಿ ಅವರು ತಮ್ಮ ಲೋಕಸಭೆ ಕ್ಷೇತ್ರವಾದ ರಾಯ್ ಬರೇಲಿಗೆ ಪದೇಪದೆ ತೆರಳುತ್ತಾರೆ. ಆದರೆ, ರಾಯ್ ಬರೇಲಿಯಿಂದ ಕೇವಲ 2 ಗಂಟೆಯಲ್ಲಿ ಕ್ರಮಿಸಬಹುದಾದ, ಬರೀ 120 ಕಿಲೋಮೀಟರ್ ದೂರದಲ್ಲಿರುವ ಪ್ರಯಾಗರಾಜ್ ಕುಂಭಮೇಳಕ್ಕೆ ತೆರಳಲು ಅವರಿಗೆ ಆಗಲಿಲ್ಲ” ಎಂದಿದ್ದಾರೆ. ಬಿಜೆಪಿ ಎಕ್ಸ್ ಖಾತೆಯಿಂದಲೂ ಇದರ ಕುರಿತು ಪೋಸ್ಟ್ ಮಾಡಲಾಗಿದೆ. ರಾಹುಲ್ ಗಾಂಧಿ ಅವರು ಇದುವರೆಗೆ ರಾಮಮಂದಿರಕ್ಕೆ ಭೇಟಿ ನೀಡದಿರುವುದು ಕಾಂಗ್ರೆಸ್ಸಿನ ಹಿಂದೂ ವಿರೋಧಿ ಮನಸ್ಥಿತಿಗೆ ಸಾಕ್ಷಿ ಎಂದು ಪೋಸ್ಟ್ ಮಾಡಿದೆ.
ಪ್ರಿಯಾಂಕ್ ಖರ್ಗೆ ತಿರುಗೇಟು
ಬಿಜೆಪಿ ಆರೋಪಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಎಕ್ಸ್ ಪೋಸ್ಟ್ ಮೂಲಕ ತಿರುಗೇಟು ನೀಡಿದ್ದಾರೆ. “ಕೇಂದ್ರ ಸಂಪುಟದ ಅರ್ಧದಷ್ಟು ಸಚಿವರು, ದೇಶಾದ್ಯಂತ ಇರುವ ಬಿಜೆಪಿ ಶಾಸಕರಲ್ಲಿ ಅರ್ಧದಷ್ಟು ಜನ ಕುಂಭಮೇಳಕ್ಕೆ ತೆರಳಿಲ್ಲ. ಎನ್ ಡಿಎ ಮಿತ್ರಕೂಟದ ನಿತೀಶ್ ಕುಮಾರ್, ಎಚ್.ಡಿ.ಕುಮಾರಸ್ವಾಮಿ ಸೇರಿ ಹಲವರು ಮಹಾ ಕುಂಭಮೇಳಕ್ಕೆ ತೆರಳಲಿಲ್ಲ. ಇವರೆಲ್ಲರೂ ಹಿಂದೂ ವಿರೋಧಿಗಳಲ್ಲವೇ” ಎಂದು ತಿರುಗೇಟು ನೀಡಿದ್ದಾರೆ.