ಬೆಂಗಳೂರು: ಆರ್ ಆರ್ ನಗರದಲ್ಲಿ ಡಿಕೆ ಬ್ರದರ್ಸ್ ವರ್ಸಸ್ ಶಾಸಕ ಮುನಿರತ್ನ ಜಟಾಪಟಿ ಜೋರಾಗಿದೆ. ಸಿನಿಮಾ ರಂಗದವರ ನಟ್ಟು, ಬೋಲ್ಟ್ ಸರಿ ಮಾಡುತ್ತೇನೆಂದು ಡಿಕೆಶಿ ಹೇಳಿದ್ದೇ ತಡ, ಮುನಿರತ್ನ ಡಿಕೆಶಿ ವಿರುದ್ಧ ಮುಗಿ ಬಿದ್ದಿದ್ದರು. ಅಲ್ಲದೇ, ಡಿಕೆ ಬ್ರದರ್ಸ್ ವಿರುದ್ಧ ಅವಕಾಶ ಸಿಕ್ಕಾಗಲೆಲ್ಲ ಆರೋಪ ಮಾಡುತ್ತಿದ್ದರು. ಇದರಿಂದ ಕೆಂಡಾಮಂಡಲವಾಗಿರುವ ಕಾಂಗ್ರೆಸ್ ಕಾರ್ಯಕರ್ತರು ಅಭಿಯಾನ ಆರಂಭಿಸಿದ್ದಾರೆ.
ಶಾಸಕ ಮುನಿರತ್ನ ವಿರುದ್ದ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಅಭಿಯಾನ ಶುರು ಮಾಡಿದ್ದಾರೆ. ಬೆಂ.ಪಶ್ಚಿಮ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಜಯ್ ಸಶಿಮಠ, ಲಗ್ಗೇರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ, ಕೊಟ್ಟಿಗೆಪಾಳ್ಯ ವಾರ್ಡ್ ಅಧ್ಯಕ್ಷ ಸುಂಕದಕಟ್ಟೆ ನವೀನ್, ಕುಶಾಲ್ ಹರುವೇಗೌಡ ಸೇರಿದಂತೆ ಕೆಲವು ಕಾರ್ಯಕರ್ತರು ಮುನಿರತ್ನ ವಿರುದ್ಧ ಅಭಿಯಾನ ಆರಂಭಿಸಿದ್ದಾರೆ.
ಮಲ್ಲತ್ತಹಳ್ಳಿ ಕೆರೆಗೆ ಬಿಡುಗಡೆಯಾದ ಅನುದಾನದ ಅಂಕಿ-ಅಂಶಗಳ ಸಮೇತ ಪ್ರತಿ ಹಂಚುತ್ತಿದ್ದಾರೆ. ಮಲ್ಲತ್ತಹಳ್ಳಿ ಕೆರೆಯ ಮುಂಭಾಗದಲ್ಲಿರುವ ಕುವೆಂಪು ಪಾರ್ಕ್ ನಲ್ಲಿ ಪ್ರತಿ ಹಂಚಿ ವಿನೂತನ ಪ್ರತಿಭಟನೆ ನಡೆಸುತ್ತಿದ್ದಾರೆ. ಕೆರೆ ಕಳ್ಳ ಮುನಿರತ್ನ ಕಾಲ್ಗುಣದಿಂದ ಮಲ್ಲತ್ತಹಳ್ಳಿ ಕೆರೆಗೆ ಬಂದಿದ್ದು 84 ಕೋಟಿ ರೂ. ಆದರೆ, ಕೆರೆ ಹಾಳು ಮಾಡಲು ಖರ್ಚು ಮಾಡಿದ್ದು ಅಬ್ಬಬ್ಬಾ ಅಂದರೆ, 10 ಕೋಟಿ ರೂ. ಮಿಕ್ಕಿದ ಕೋಟಿ ಎಲ್ಲ ಲೂಟಿಯಾಗಿದೆ. ಲೂಟಿ ಮಾಡಿ ಎಲೆಕ್ಷನ್ ಟೈಮ್ ನಲ್ಲಿ ಕೊಡ್ತಾರೆ ಕುಕ್ಕರ್-ಸೀರೆ-ಓಟಿ. ಇಷ್ಟೆಲ್ಲಾ ಲೂಟಿಯನ್ನು ಪ್ರಶ್ನಿಸೋದೇ ಅಲ್ವಾ? ನಮ್ ಡ್ಯೂಟಿ ಎಂದು ಕರಪತ್ರ ಹಂಚುತ್ತಿದ್ದಾರೆ.