ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್ಸಿ) ಗೆಜೆಟೆಡ್ ಪ್ರೊಬೇಷನರ್ 384 ಗ್ರೂಪ್-ಎ ಮತ್ತು ಗ್ರೂಪ್-ಬಿ ಹುದ್ದೆಗಳ ನೇಮಕಾತಿ ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರ ಪಟ್ಟಿ ಬಿಡುಗಡೆ ಮಾಡಿತ್ತು. ಈಗ ಮುಖ್ಯ ಪರೀಕ್ಷೆಗೆ ಅರ್ಜಿ ಸಲ್ಲಿಕೆ ಮಾಡುವ ಪರಿಷ್ಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಮಾರ್ಚ್ 13ರ ತನಕ ಅರ್ಜಿಗಳನ್ನು ಸಲ್ಲಿಕೆ ಮಾಡಬಹುದಾಗಿದೆ.
ದಿನಾಂಕ 13-02-2025ರ ಮುಖ್ಯಪರೀಕ್ಷೆಯ ಅಧಿಸೂಚನೆಯಲ್ಲಿ ಪೂರ್ವಭಾವಿ ಪರೀಕ್ಷೆಯಿಂದ ಮುಖ್ಯಪರೀಕ್ಷೆಗೆ 1:15 ಅನುಪಾತದಲ್ಲಿ ಅರ್ಹರಾದ ಅಭ್ಯರ್ಥಿಗಳಿಂದ ಅರ್ಜಿ ಸ್ವೀಕರಿಸಲು ದಿನಾಂಕ 17-02-2025 ರಿಂದ 03-03-2025ರವರೆಗೆ ಕಾಲಾವಕಾಶವನ್ನು ನೀಡಲಾಗಿತ್ತು. ಇದನ್ನೇ ಈಗ ಪರಿಷ್ಕರಣೆ ಮಾಡಲಾಗಿದೆ.
ಡಿಸೆಂಬರ್ 29, 2024ರಂದು ನಡೆದ ಪೂರ್ವಭಾವಿ ಪರೀಕ್ಷೆಯಿಂದ ಮುಖ್ಯ ಪರೀಕ್ಷೆಗೆ 1:15ರ ಅನುಪಾತದಲ್ಲಿ ಅರ್ಹರಾದ ಅಭ್ಯರ್ಥಿಗಳ ಅರ್ಹತಾ ಪಟ್ಟಿಯನ್ನು ಅಭ್ಯರ್ಥಿಗಳ ಮಾಹಿತಿಗಾಗಿ ಈಗಾಗಲೇ ಪ್ರಕಟಿಸಿದೆ. ಮುಖ್ಯ ಪರೀಕ್ಷೆಗೆ ಅರ್ಹರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಪ್ರಶ್ನೆ ಪತ್ರಿಕೆಯಲ್ಲಿ ಭಾಷಾಂತರದ ಯಡವಟ್ಟಿನ ಕಾರಣ 2024ರ ಆಗಸ್ಟ್ ಮತ್ತು ಡಿಸೆಂಬರ್ನಲ್ಲಿ ಎರಡು ಬಾರಿ ಪೂರ್ವಭಾವಿ ಪರೀಕ್ಷೆ ಮಾಡಲಾಗಿತ್ತು. ಈ ಪರೀಕ್ಷೆ ರಾಜ್ಯದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿತ್ತು. ದಿನಾಂಕ 29-12-2024ರಂದು ನಡೆಸಿದ ಮರು ಪರೀಕ್ಷೆಯಲ್ಲಿಯೂ ಪ್ರಶ್ನೆ ಪತ್ರಿಕೆ ದೋಷವಿತ್ತು. ಆದರೆ ಮತ್ತೆ ಪರೀಕ್ಷೆ ನಡೆಸುವುದಿಲ್ಲ ಎಂದು ಕೆಪಿಎಸ್ಸಿ ಹೇಳಿತ್ತು, ಈಗ ಮುಂದಿನ ಪ್ರಕ್ರಿಯೆ ಕೈಗೊಳ್ಳಲಾಗಿದೆ.
ಪ್ರಮುಖ ದಿನಾಂಕಗಳು
ಪರಿಷ್ಕೃತ ದಿನಾಂಕ: 27-02-2025 ರಿಂದ 13-03-2025ರವರೆಗೆ
ಮುಖ್ಯ ಪರೀಕ್ಷೆ ದಿನಾಂಕಗಳು : 28-03-2025, 29-03-2025, 01-04-2025, 02-04-2025
ಮುಖ್ಯ ಪರೀಕ್ಷೆಯ ಕೇಂದ್ರಗಳು: ಬೆಂಗಳೂರು ಮತ್ತು ಧಾರವಾಡ ಜಿಲ್ಲಾ ಕೇಂದ್ರಗಳಲ್ಲಿ ಮಾತ್ರ ಪರೀಕ್ಷೆ ನಡೆಸಲಾಗುತ್ತದೆ.
ಅರ್ಜಿ ಸಲ್ಲಿಕೆಗೆ ಲಿಂಕ್
ಕರ್ನಾಟಕ ಲೋಕಸೇವಾ ಆಯೋಗದ http://kpsc.kar.nic.in ಗೆ ಭೇಟಿ ನೀಡಿ, ಅಲ್ಲಿ ಒದಗಿಸಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಎಸ್ಸಿ, ಎಸ್ಟಿ, ಪ್ರವರ್ಗ-1, ವಿಶೇಷ ಚೇತನರು, ಮಾಜಿ ಸೈನಿಕರಿಗೆ 300 ರೂಪಾಯಿ ಅರ್ಜಿ ಶುಲ್ಕ ಇದೆ. ಇನ್ನು, ಜನರಲ್, ಒಬಿಸಿ, ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ 500 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ.