ದುಬೈ: ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ(Virat Kohli) ಅವರಿಗೆ ಭಾನುವಾರ ಸ್ಮರಣೀಯ ದಿನ. ಅವರು ಏಕದಿನ ಮಾದರಿಯಲ್ಲಿ 300ನೇ ಏಕದಿನ ಪಂದ್ಯವಾಡಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲಲ್ಲಿ ಅವರು ಈ ಮೈಲುಗಲ್ಲು ದಾಟಲಿದ್ದಾರೆ.
ಈ ವಿಶೇಷ ಸಂಭ್ರಮದಲ್ಲಿ ಕೊಹ್ಲಿಗೆ ಬೆಂಬಲ ಸೂಚಿಸಲು ಕೊಹ್ಲಿಯ ಪತ್ನಿ ಹಾಗೂ ನಟಿ ಅನುಷ್ಕಾ ಶರ್ಮಾ(Anushka Sharma), ಸಹೋದರ ವಿಕಾಸ್ ಕೊಹ್ಲಿ ಮತ್ತು ಅವರ ಕುಟುಂಬವೇ ಶನಿವಾರವೇ ದುಬೈಗೆ ಹೋಗಿದ್ದಾರೆ.
ಕೊಹ್ಲಿ 300 ಏಕದಿನ ಪಂದ್ಯವನ್ನಾಡಿದ 7ನೇ ಭಾರತೀಯ ಹಾಗೂ ಒಟ್ಟಾರೆ 22ನೇ ಆಟಗಾರ ಎನಿಸಲಿದ್ದಾರೆ. ಈ ವೇಳೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರಿರುವ ಎಲೈಟ್ ಪಟ್ಟಿಗೆ ಸೇರಲಿದ್ದಾರೆ. ಒಟ್ಟಾರೆಯಾಗಿ ಭಾರತ ಪರ ಅತ್ಯಧಿಕ ಏಕದಿನ ಪಂದ್ಯವನ್ನಾಡಿದ ದಾಖಲೆ ಸಚಿನ್ ತೆಂಡುಲ್ಕರ್ (463), ಹೆಸರಿನಲ್ಲಿದೆ. ಆ ಬಳಿಕ ಎಂಎಸ್ ಧೋನಿ (350), ರಾಹುಲ್ ದ್ರಾವಿಡ್ (344), ಅಜರುದ್ದೀನ್ (334), ಸೌರವ್ ಗಂಗೂಲಿ (311) ಮತ್ತು ಯುವರಾಜ್ ಸಿಂಗ್ (304) ಕಾಣಿಸಿಕೊಂಡಿದ್ದಾರೆ.
ಭಾರತ ಪರ ಮೊದಲು 300 ಏಕದಿನ ಪಂದ್ಯವನ್ನು ಪೂರ್ತಿಗೊಳಿಸಿದ್ದ ದಾಖಲೆ ಮೊಹಮ್ಮದ್ ಅಜರುದ್ದೀನ್ ಹೆಸರಿನಲ್ಲಿದೆ. ವಿಶೇಷ ಎಂದರೆ ಅಜರುದ್ದೀನ್ ಕೂಡ 1998ರಲ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲೇ 300ನೇ ಪಂದ್ಯವಾಡಿದ್ದರು.
2008ರಲ್ಲಿ ಶ್ರೀಲಂಕಾ ವಿರುದ್ಧ ಡಂಬುಲಾದಲ್ಲಿ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ವಿರಾಟ್ ಕೊಹ್ಲಿ ಇದುವರೆಗೆ 299* ಪಂದ್ಯಗಳ 287 ಇನಿಂಗ್ಸ್ಗಳಲ್ಲಿ 51 ಶತಕ, 73 ಅರ್ಧಶತಕಗಳ ಸಹಿತ 58.20ರ ಸರಾಸರಿಯಲ್ಲಿ 14,085 ರನ್ ಬಾರಿಸಿದ್ದಾರೆ. ಜತೆಗೆ 158 ಕ್ಯಾಚ್ ಹಿಡಿದಿದ್ದು, 5 ವಿಕೆಟ್ ಕೂಡ ಕಬಳಿಸಿದ್ದಾರೆ. 183 ರನ್ ಅವರ ಗರಿಷ್ಠ ಗಳಿಕೆಯಾಗಿದೆ.
ಹೊಸ ನಿಯಮದ ಅಡಚಣೆ
ಬಿಸಿಸಿಐ ನೂತನ ನಿಯಮದ ಪ್ರಕಾರ 45ಕ್ಕೂ ಅಧಿಕ ದಿನಗಳ ಕಾಲ ವಿದೇಶಿ ಕ್ರಿಕೆಟ್ ಪ್ರವಾಸದಲ್ಲಿದ್ದರೆ, ಆಗ ಕುಟುಂಬ ಸದಸ್ಯರು ಗರಿಷ್ಠ 2 ವಾರಗಳ ಕಾಲ ಅವರ ಜತೆಗಿರಬಹುದು. ಚಾಂಪಿಯನ್ಸ್ ಟ್ರೋಫಿ ಬರೀ ಮೂರು ವಾರದಲ್ಲಿ ಮುಕ್ತಾಯಗೊಳ್ಳುತ್ತದೆ ಹೀಗಾಗಿ ಈ ಬಾರಿ ಆಟಗಾರರ ಜತೆ ಕುಟುಂಬಕ್ಕೆ ಪ್ರಯಾಣಿಸಲು ಅವಕಾಶವೇ ಇಲ್ಲ. ಆದರೂ ಒಂದು ಪಂದ್ಯಕ್ಕೆ ಮಾತ್ರ ಅವಕಾಶ ನೀಡಿತ್ತು. ಹೀಗಾಗಿ ಕೊಹ್ಲಿ ಕುಟುಂಬ ಪಾಕ್ ವಿರುದ್ಧದ ಪಂದ್ಯಕ್ಕೆ ಹಾಜರಾಗದೆ ಕೊಹ್ಲಿಯ 300ನೇ ಪಂದ್ಯಕ್ಕೆ ಹಾಜರಾಗುತ್ತಿದೆ.