ನವದೆಹಲಿ: ಭಾನುವಾರದಿಂದ ದೇಶಾದ್ಯಂತ ಮುಸ್ಲಿಮರ ಪವಿತ್ರ ಮಾಸ ರಂಜಾನ್ ಆರಂಭವಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮೂಲಕ ಭಾರತೀಯ ಮುಸ್ಲಿಮರಿಗೆ ಶುಭಾಶಯ ಕೋರಿದ್ದಾರೆ.
“ಪವಿತ್ರ ರಂಜಾನ್ ತಿಂಗಳು ಪ್ರಾರಂಭವಾಗಿದೆ. ಇದು ನಮ್ಮ ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ತರಲಿ. ಈ ಪವಿತ್ರ ತಿಂಗಳು ಕೃತಜ್ಞತೆ ಮತ್ತು ಭಕ್ತಿಯನ್ನು ಸಂಕೇತಿಸುತ್ತದೆ, ಸಹಾನುಭೂತಿ, ದಯೆ ಮತ್ತು ಸೇವೆಯ ಮೌಲ್ಯಗಳನ್ನು ನೆನಪಿಸುತ್ತದೆ. ಎಲ್ಲರಿಗೂ ರಂಜಾನ್ ಮುಬಾರಕ್!” ಎಂದು ಮೋದಿಯವರು ಟ್ವೀಟ್ ಮಾಡಿದ್ದಾರೆ.
ಇವರಲ್ಲದೇ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರೂ ಎಲ್ಲರಿಗೂ ರಂಜಾನ್ ಶುಭಾಶಯ ಕೋರಿದ್ದಾರೆ.
“ರಂಜಾನ್ ಮುಬಾರಕ್! ಈ ಪವಿತ್ರ ತಿಂಗಳು ನಿಮ್ಮ ಜೀವನಕ್ಕೆ ಸಂತೋಷವನ್ನು ತುಂಬಲಿ ಮತ್ತು ನಿಮ್ಮ ಹೃದಯಕ್ಕೆ ಶಾಂತಿಯನ್ನು ತರಲಿ” ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಿಯಾಂಕಾ ಗಾಂಧಿ ವಾದ್ರಾ, “ನಿಮಗೆಲ್ಲರಿಗೂ ಪವಿತ್ರ ರಂಜಾನ್ ಮಾಸದ ಶುಭಾಶಯಗಳು. ಈ ಪವಿತ್ರ ತಿಂಗಳು ನಿಮ್ಮೆಲ್ಲರ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಶಾಂತಿಯನ್ನು ತರಲಿ ಎಂದು ನಾನು ದೇವರನ್ನು ಪ್ರಾರ್ಥಿಸುತ್ತೇನೆ” ಎಂದಿದ್ದಾರೆ.
ಇದೇ ವೇಳೆ, ಜಮ್ಮು- ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಪವಿತ್ರ ರಂಜಾನ್ ಮಾಸದ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಸಭೆಯಲ್ಲಿ, ಸಿಎಂ ಒಮರ್ ಅಬ್ದುಲ್ಲಾ ಅವರು ತಿಂಗಳಾದ್ಯಂತ ವಿದ್ಯುತ್ ಮತ್ತು ಇತರ ಮೂಲಭೂತ ಸೇವೆಗಳ ಸರಿಯಾದ ಪೂರೈಕೆಯನ್ನು ಖಚಿತಪಡಿಸಿಕೊಳ್ಳುವಂತೆಯೂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
“ಪವಿತ್ರ ರಂಜಾನ್ ತಿಂಗಳು ಪ್ರಾರಂಭವಾಗುತ್ತಿದೆ. ಜನರಿಗೆ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಸಭೆ ನಡೆಸಲಾಗಿದ್ದು, ಈ ಸಂದರ್ಭದಲ್ಲಿ ಪ್ರತಿ ಇಲಾಖೆಯ ಪರಿಶೀಲನೆ ನಡೆಸಲಾಯಿತು. ವಿದ್ಯುತ್ ಪೂರೈಕೆಯಲ್ಲಿ ಯಾವುದೇ ನ್ಯೂನತೆಗಳು ಇರಬಾರದು, ವಿಶೇಷವಾಗಿ ಸೆಹ್ರಿ (ಮುಂಜಾನೆಯ ಊಟ) ಮತ್ತು ಇಫ್ತಾರ್ (ಸಂಜೆ ಉಪವಾಸ ಮುರಿಯುವ ಸಮಯ) ವೇಳೆನೀರು ಸರಬರಾಜು, ಪಡಿತರ, ಸ್ವಚ್ಛತೆ, ನೈರ್ಮಲ್ಯ ಮತ್ತು ಸಂಚಾರದ ಸಮಯದಲ್ಲಿ ಯಾವುದೇ ನ್ಯೂನತೆಗಳು ಇರಬಾರದು ಎಂದು ಎಲ್ಲರಿಗೂ ಸ್ಪಷ್ಟವಾಗಿ ಸೂಚನೆ ನೀಡಲಾಯಿತು. “ಎಂದು ಒಮರ್ ವರದಿಗಾರರಿಗೆ ತಿಳಿಸಿದ್ದಾರೆ.
30 ದಿನಗಳ ಉಪವಾಸದ ಅವಧಿಯಿರುವ ಪವಿತ್ರ ರಂಜಾನ್ ತಿಂಗಳು ಮಾರ್ಚ್ 2 ರಿಂದ ಆರಂಭವಾಗಿದೆ. 30 ದಿನಗಳ ಉಪವಾಸ ವ್ರತ ಮುಗಿದೊಡನೆ ಈದ್-ಉಲ್-ಫಿತರ್ ಹಬ್ಬ ಆಚರಿಸಲಾಗುತ್ತದೆ.