ಚೆನ್ನೈ: ತಾಪಮಾನ ಹೆಚ್ಚಳದಿಂದಾಗಿ ಜನರು ಕಂಗಾಲಾಗಿರುವಂತೆಯೇ, ತಮಿಳುನಾಡಿನ ಹಲವೆಡೆ ಏಕಾಏಕಿ ಮಳೆರಾಯ ತಂಪೆರೆದಿದ್ದಾನೆ. ತೂತುಕುಡಿ, ಕನ್ಯಾಕುಮಾರಿ ಸೇರಿದಂತೆ ತಮಿಳುನಾಡಿನ ಹಲವು ಪ್ರದೇಶಗಳಲ್ಲಿ ಶುಕ್ರವಾರ ರಾತ್ರಿಯಿಂದೀಚಿಗೆ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿವೆ.
10 ಜಿಲ್ಲೆಗಳಲ್ಲಿ ಮಾರ್ಚ್ 3 ರವರೆಗೂ ಧಾರಾಕಾರ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.
ಕನ್ಯಾಕುಮಾರಿ, ತಿರುನೆಲ್ವೇಲಿ, ತೆಂಕಾಸಿ, ತೂತುಕುಡಿ, ವಿರುಧುನಗರ ಮತ್ತು ರಾಮನಾಥಪುರಂ ಸೇರಿದಂತೆ ತಮಿಳುನಾಡಿನ ಹಲವಾರು ಜಿಲ್ಲೆಗಳಲ್ಲಿ ಹಗುರದಿಂದ ಮಧ್ಯಮ ಮಳೆಯಾಗಿದೆ. ಇದರಿಂದಾಗಿ ರಸ್ತೆಗಳೆಲ್ಲ ಜಲಾವೃತವಾಗಿವೆ. ಉತ್ತರ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನ ಕೆಲವು ಪ್ರದೇಶಗಳಿಗೆ ಮಳೆ ಎಚ್ಚರಿಕೆ ನೀಡಲಾಗಿದೆ.
ಪೂರ್ವ ಮಾರುತಗಳ ವೇಗದಲ್ಲಿನ ಬದಲಾವಣೆಯು ತಮಿಳುನಾಡಿನ ಹಲವಾರು ಪ್ರದೇಶಗಳಲ್ಲಿ ಭಾರೀ ಮಳೆಗೆ ಕಾರಣ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ನದಿಮುಖಜ ಭೂಮಿ ಪ್ರದೇಶಗಳಲ್ಲಿ ಸುಗ್ಗಿಯ ಋತುವು ಭರದಿಂದ ಸಾಗುತ್ತಿರುವುದರಿಂದ ಹಠಾತ್ ಆಗಿ ಮಳೆ ಸುರಿಯುತ್ತಿರುವುದು ಕೃಷಿಕರನ್ನು ಆತಂಕಕ್ಕೆ ನೂಕಿದೆ. ತಿರುವಾರೂರು ಜಿಲ್ಲೆಯ ಕೂತನಲ್ಲೂರ್ ತಾಲ್ಲೂಕಿನ ಒಕೈ ಪೆರೈಯೂರ್‌ನಲ್ಲಿ ತಾತ್ಕಾಲಿಕ ಶೆಡ್‌ನಲ್ಲಿ ಭತ್ತ ಖರೀದಿ ಕೇಂದ್ರವಿದ್ದು, ಅದರಲ್ಲಿ ನೀರು ಸಂಗ್ರಹವಾಗುತ್ತಿರುವ ಕುರಿತು ರೈತರು ಆಕ್ರೋಶ ವ್ಯಕ್ತವಡಿಸಿದ್ದಾರೆ. ಭತ್ತದ ಕಟ್ಟುಗಳನ್ನು ಸುರಕ್ಷಿತವಾಗಿ ಸಂಗ್ರಹಿಸಲು ಶಾಶ್ವತ ಕಟ್ಟಡವನ್ನು ನಿರ್ಮಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ತಂಜಾವೂರು, ತಿರುವರೂರು, ನಾಗಪಟ್ಟಿಣಂ, ಮಯಿಲಾಡುತುರೈ, ಕಡಲೂರು ಮತ್ತು ಪುದುಕೊಟ್ಟೈ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ, ಸಂಗ್ರಹಿಸಿದ ಭತ್ತವನ್ನು ಹಾನಿಗೊಳಗಾಗದಂತೆ ರಕ್ಷಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶನ ನೀಡಿದ್ದಾರೆ.