ಚಂಡೀಗಢ: ಹರಿಯಾಣದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಹೊತ್ತಿನಲ್ಲೇ 22 ವರ್ಷದ ಕಾಂಗ್ರೆಸ್ ಕಾರ್ಯಕರ್ತೆಯ ಹತ್ಯೆಯಾಗಿದೆ. ರೋಹ್ಟಕ್ ನಲ್ಲಿ ಹಿಮಾನಿ ನರ್ವಾಲ್ ಎಂಬ ಯುವ ಕಾರ್ಯಕರ್ತೆಯ ಶವವು ಸೂಟ್ ಕೇಸ್ ನಲ್ಲಿ ಪತ್ತೆಯಾಗಿದ್ದು, ಉನ್ನತ ತನಿಖೆಗೆ ಕಾಂಗ್ರೆಸ್ ಆಗ್ರಹಿಸಿದೆ. ಸಂಪ್ಲಾ ಬಸ್ ಸ್ಟ್ಯಾಂಡ್ ಬಳಿ ಶವ ಪತ್ತೆಯಾಗಿದ್ದು, ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಹಿಮಾನಿ ನರ್ವಾಲ್ ಅವರ ಕುತ್ತಿಗೆಗೆ ದುಪಟ್ಟಾ ಬಿಗಿದು ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಪೊಲೀಸರು ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ. ದೊಡ್ಡದೊಂದು ಸೂಟ್ ಕೇಸ್ ನಲ್ಲಿ ಯುವ ಕಾರ್ಯಕರ್ತೆಯ ಶವವನ್ನು ತುರುಕಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಭಾನುವಾರವೇ ಹರಿಯಾಣದ 33 ಮುನ್ಸಿಪಲ್ ಕಾರ್ಪೊರೇಷನ್ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಇದೇ ವೇಳೆ ಕಾಂಗ್ರೆಸ್ ಕಾರ್ಯಕರ್ತೆಯ ಶವ ಪತ್ತೆಯಾಗಿರುವುದು ಹಲವು ಅನುಮಾನ ಮೂಡಿಸಿದೆ.
ಭಾರತ್ ಜೋಡೋದಲ್ಲಿ ಭಾಗಿ
ಹಿಮಾನಿ ನರ್ವಾಲ್ ಅವರು ಕಾಂಗ್ರೆಸ್ ನಲ್ಲಿ ಸಕ್ರಿಯರಾಗಿದ್ದರು. ಅವರು ಪಕ್ಷದ ಹತ್ತಾರು ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಅಷ್ಟೇ ಅಲ್ಲ, ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯಲ್ಲೂ ಪಾಲ್ಗೊಂಡಿದ್ದರು. ಇವರು ರಾಹುಲ್ ಗಾಂಧಿ ಜತೆಗೆ ತೆಗೆಸಿಕೊಂಡಿದ್ದ ಫೋಟೋಗಳು ಈಗ ವೈರಲ್ ಆಗುತ್ತಿವೆ.
ಉನ್ನತ ತನಿಖೆಗೆ ಆಗ್ರಹ
ಹಿಮಾನಿ ನರ್ವಾಲ್ ಹತ್ಯೆಯ ಬೆನ್ನಲ್ಲೇ ಉನ್ನತ ತನಿಖೆಗೆ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಹೂಡಾ ಆಗ್ರಹಿಸಿದ್ದಾರೆ. “ಕಾಂಗ್ರೆಸ್ ಕಾರ್ಯಕರ್ತೆ ಹಿಮಾನಿ ನರ್ವಾಲ್ ಅವರ ಬರ್ಬರ ಹತ್ಯೆಯ ಸುದ್ದಿ ತಿಳಿದು ಮನಸ್ಸಿಗೆ ಖೇದವಾಗಿದೆ. ದೇವರು ಹಿಮಾನಿ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಹಾಗೆಯೇ, ಸರ್ಕಾರವು ಉನ್ನತ ಮಟ್ಟದ ತನಿಖೆ ನಡೆಸಿ, ಅಪರಾಧಿಗಳಿಗೆ ಶಿಕ್ಷೆ ನೀಡಬೇಕು. ಆ ಮೂಲಕ ಕಾರ್ಯಕರ್ತೆಯ ಕುಟುಂಬಸ್ಥರಿಗೆ ನ್ಯಾಯ ಒದಗಿಸಬೇಕು” ಎಂದು ಪೋಸ್ಟ್ ಮಾಡಿದ್ದಾರೆ.