ತುಮಕೂರು: ನೀರಾ ಇಳಿಸುತಿದ್ದ ರೈತನನ್ನು ಬಂಧಿಸಿದಕ್ಕೆ ರೈತ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಡೆದಿದೆ.
ರೈತ ಮುಖಂಡರು ಅಬಕಾರಿ ಇಲಾಖೆ ಅಧಿಕಾರಿಗಳ ಕಾರು ತಡೆದು ಪ್ರತಿಭಟನೆ ನಡೆಸಿದ್ದಾರೆ. ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರಿನ ಕಂಪನಹಳ್ಳಿ ಬಳಿ ಈ ಘಟನೆ ನಡೆದಿದೆ. ರೈತ ಈರಣ್ಣ ತಮ್ಮ ತೋಟದಲ್ಲಿ ನೀರಾ ಇಳಿಸುತಿದ್ದರು ಎನ್ನಲಾಗಿದೆ. ಆದರೆ, ಈ ವೇಳೆ ದಾಳಿ ಮಾಡಿದ ಅಬಕಾರಿ ಅಧಿಕಾರಿಗಳು ಅನುಮತಿ ಇಲ್ಲದೆ ನೀರಾ ಇಳಿಸುತ್ತಿದ್ದಾರೆ ಎಂದು ಬಂಧಿಸಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ರೈತ ಮುಖಂಡ ಚಂದ್ರಣ್ಣ ಪ್ರತಿಭಟನೆ ನಡೆಸಿದ್ದಾರೆ.
ಈ ವೇಳೆ ಅಬಕಾರ ಇನ್ಸ್ ಪೆಕ್ಟರ್ ನವೀನ್ ಹಾಗೂ ರೈತ ಮುಖಂಡ ಚಂದ್ರಣ್ಣ ನಡುವೆ ಮಾತಿನ ಚಕಮಕಿ ನಡೆದಿದೆ. ಅಬಕಾರಿ ಅಧಿಕಾರಿಗಳ ವಾಹನ ತಡೆದು ರೈತ ಈರಣ್ಣನನ್ನು ವಾಹನದಿಂದ ಕೆಳಗೆ ಇಳಿಸುವಂತೆ ಪಟ್ಟು ಹಿಡಿದಿದ್ದಾರೆ. ಆಗ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕೇಸ್ ಹಾಕುವುದಾಗಿ ಅಬಕಾರಿ ಬೆದರಿಕೆ ಹಾಕಿದ್ದಾರೆ. ಆನಂತರ ರೈತನನ್ನು ಬಿಟ್ಟು ಅಬಕಾರಿ ಅಧಿಕಾರಿ ಎಚ್ಚರಿಕೆ ನೀಡಿ ಹೋಗಿದ್ದಾರೆ.