ಹಾಸನ: ಮಾ.22 ರಂದು ಕರ್ನಾಟಕ ಬಂದ್ ವಿಚಾರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಮಾತನಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಭಾಷೆ ಆಧಾರದ ಮೇಲೆ ಯಾರನ್ನೇ ದ್ವೇಷ ಮಾಡುವುದು ಸರಿಯಲ್ಲ. ಕನ್ನಡಿಗರು ಮರಾಠಿಗರನ್ನು ದ್ವೇಷ ಮಾಡೋದು, ಮರಾಠಿಗರು ಕನ್ನಡಿಗರನ್ನು ದ್ವೇಷ ಮಾಡುವ ಪ್ರಕ್ರಿಯೆ ಕೆಲವು ಕಿಡಿಗೇಡಿಗಳಿಂದ ನಡೆದಿದೆ. ಇಲ್ಲೂ ನಡೆದಿದೆ, ಅಲ್ಲಿಯೂ ನಡೆದಿದೆ. ಕಿಡಿಗೇಡಿಗಳು ಮಾಡುವ ಅವಾಂತರದಿಂದ ಜನಸಾಮಾನ್ಯರಿಗೆ ತೊಂದರೆ ಆಗುತ್ತದೆ. ಕನ್ನಡಿಗರು ಇರಬಹುದು, ಮರಾಠಿಗರು ಇರಬಹುದು ಅದನ್ನು ಬೆಂಬಲಿಸಬಾರದು. ಆ ವಿಚಾರದಲ್ಲಿ ನಮ್ಮ ಸರ್ಕಾರ ಈಗಾಗಲೇ ಮಹಾರಾಷ್ಟ್ರ ಸರ್ಕಾರದ ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿದೆ. ಮುಖ್ಯಮಂತ್ರಿಗಳು ಅಲ್ಲಿನ ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದಾರೆ. ಹೀಗಾಗಿ ಆ ಸಮಸ್ಯೆ ಬಗೆಹರಿಯುತ್ತದೆ ಎಂದು ಹೇಳಿದ್ದಾರೆ.
ಇಶಾ ಫೌಂಡೇಶನ್ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಭಾಗಿಯಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ರಾಹುಲ್ ಗಾಂಧಿ ಯಾರು ನನಗೆ ಗೊತ್ತಿಲ್ಲ ಅಂತ ಹೇಳ್ದವ್ನು ಸದ್ಗುರು. ನಮ್ಮ ನಾಯಕರಾಗಿರುವ ರಾಹುಲ್‌ಗಾಂಧಿ ಅವರ ಬಗ್ಗೆ ಲೋಕಸಭೆಯಲ್ಲಿ ಯಾರು ಏನು ಮಾತನಾಡ್ತಾರೆ ಅನ್ನೋದು ಲೋಕಸಭಾ ಸದಸ್ಯರಿಗೆ ವಿವರವಾಗಿ ಗೊತ್ತಿದೆ. ಅಂತಹ ವ್ಯಕ್ತಿಯೊಂದಿಗೆ ವೇದಿಕೆ ಅಲಂಕರಿಸುತ್ತಾರೆ ಎನ್ನುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದನ್ನು ಅವರೇ ಹೇಳಬೇಕು ಎಂದು ಅಸಮಾಧಾನ ಹೊರ ಹಾಕಿದ್ದಾರೆ.