ಹೈದರಾಬಾದ್: ತೆಲಂಗಾಣದ ಶ್ರೀಶೈಲಂ ಎಡದಂಡೆ ಕಾಲುವೆ (ಎಸ್ಎಲ್ಬಿಸಿ) ಸುರಂಗ ಯೋಜನೆಯ ಕಾಮಗಾರಿ ವೇಳೆ ಸುರಂಗ ಭಾಗಶಃ ಕುಸಿದು, 6 ದಿನಗಳ ಬಳಿಕ ಐವರ ಮೃತದೇಹ ಶನಿವಾರ ಪತ್ತೆಯಾಗಿದೆ. ಒಳಗೆ ಸಿಲುಕಿರುವ ಇನ್ನೂ ಮೂವರ ಸುಳಿವು ಇನ್ನೂ ಸಿಕ್ಕಿಲ್ಲ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.
“ಐದು ಮೃತದೇಹಗಳು ಪತ್ತೆಯಾಗಿವೆ. ಮಣ್ಣಿನಿಂದ ಅವುಗಳನ್ನು ಹೊರತೆಗೆಯುವ ಪ್ರಯತ್ನಗಳು ನಡೆಯುತ್ತಿವೆ. ಉಳಿದವರಿಗಾಗಿ ಶೋಧ ಕಾರ್ಯ ಮುಂದುವರಿಸಲಾಗುತ್ತಿದೆ” ಎಂದು ನಾಗರ್ ಕರ್ನೂಲ್ ಹೆಚ್ಚುವರಿ ಜಿಲ್ಲಾಧಿಕಾರಿ ಬಿ. ದೇವಸಹಾಯಂ ತಿಳಿಸಿದ್ದಾರೆ.
ಕಳೆದ ಒಂದು ವಾರದಿಂದಲೂ ಸುರಂಗದೊಳಗೆ ಸಿಲುಕಿದವರನ್ನು ಹೊರತೆಗೆಯುವ ನಿಟ್ಟಿನಲ್ಲಿ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿತ್ತು. ಆದರೆ, ಈಗ ರಾಷ್ಟ್ರೀಯ ಭೂಭೌತಿಕ ಸಂಶೋಧನಾ ಸಂಸ್ಥೆ (ಎನ್ಜಿಆರ್ಐ) ನಿಯೋಜಿಸಿರುವ ಗ್ರೌಂಡ್ ಪೆನೆಟ್ರೇಷನ್ ರಾಡಾರ್ (ಜಿಪಿಆರ್) ಸಹಾಯದಿಂದ ಮೃತದೇಹಗಳನ್ನು ಪತ್ತೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. “ರಾಡಾರ್ ಸುರಂಗದ ಪ್ರದೇಶವನ್ನು ಸ್ಕ್ಯಾನ್ ಮಾಡಿದೆ. ಆಗ ಮೃತದೇಹಗಳು ಕಂಡುಬಂದಿದ್ದು, ಅವುಗಳನ್ನು ಸುರಂಗದಿಂದ ಹೊರತೆಗೆದ ಬಳಿಕವಷ್ಟೇ ಗುರುತ ಪತ್ತೆಹಚ್ಚಲು ಸಾಧ್ಯ” ಎಂದು ಮೂಲಗಳು ತಿಳಿಸಿವೆ.
ಒಳಗೆ ಸಿಲುಕಿದ್ದ 6 ಮಂದಿಯಲ್ಲಿ ಇಬ್ಬರು ಎಂಜಿನಿಯರ್ಗಳು, ಇಬ್ಬರು ನಿರ್ವಾಹಕರು ಮತ್ತು ಉಳಿದ ನಾಲ್ವರು ಜಾರ್ಖಂಡ್ ಮೂಲದ ಕಾರ್ಮಿಕರಾಗಿದ್ದಾರೆ. ಇಬ್ಬರು ಎಂಜಿನಿಯರ್ಗಳು ಮತ್ತು ನಾಲ್ವರು ಕಾರ್ಮಿಕರು ಎಸ್ಎಲ್ಬಿಸಿ ಸುರಂಗ ಯೋಜನೆಯ ಗುತ್ತಿಗೆ ಪಡೆದಿರುವ ಸಂಸ್ಥೆ ಜೈಪ್ರಕಾಶ್ ಅಸೋಸಿಯೇಟ್ಸ್ನಲ್ಲಿ ಕೆಲಸ ಮಾಡುತ್ತಿದ್ದವರು. ಕೃಷ್ಣಾ ನದಿಯ ಬೃಹತ್ ಶ್ರೀಶೈಲಂ ಅಣೆಕಟ್ಟು ಸಂಕೀರ್ಣದ ಭಾಗವಾಗಿರುವ ಶ್ರೀಶೈಲಂ ಎಡದಂಡೆ ಜಲವಿದ್ಯುತ್ ಯೋಜನೆಯ ಭೂಗತ ವಿದ್ಯುತ್ ಕೇಂದ್ರದಲ್ಲಿ ಈ ಘಟನೆ ನಡೆದಿತ್ತು. ಸುರಂಗದಲ್ಲಿ ಸೋರಿಕೆಯಾದ ಕಾರಣ ರಿಪೇರಿ ಕೆಲಸಕ್ಕೆಂದು ಹೋಗಿದ್ದಾಗ ಏಕಾಏಕಿ ಸುರಂಗದ ಒಂದು ಭಾಗ ಕುಸಿದು ಬಿದ್ದಿತ್ತು.
ರಕ್ಷಣಾ ಕಾರ್ಯ ಮುಂದುವರಿಕೆ
ಸತತ 6 ದಿನಗಳಿಂದಲೂ ಭಾರತೀಯ ಸೇನೆ, ನೌಕಾಪಡೆ, ಎನ್ಡಿಆರ್ಎಫ್ ತಂಡಗಳು ನಿರಂತರವಾಗಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಇದಕ್ಕಾಗಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಏಜೆನ್ಸಿಗಳು ಮತ್ತು ಸುರಂಗಗಳ ತಜ್ಞರನ್ನೂ ಬಳಸಿಕೊಳ್ಳಲಾಗುತ್ತಿದೆ. ರಾಟ್ ಹೋಲ್ ಮೈನರ್ಸ್ ಗಳನ್ನೂ ಸ್ಥಳಕ್ಕೆ ಕರೆಸಿಕೊಳ್ಳಲಾಗಿದೆ.
ಶ್ರೀಶೈಲಂ ಎಡದಂಡೆ ಕಾಲುವೆ ಯೋಜನೆಯಲ್ಲಿ ಕನಿಷ್ಠ 800 ಜನರು ಕೆಲಸ ಮಾಡುತ್ತಿದ್ದಾರೆ, ಅವರಲ್ಲಿ 300 ಮಂದಿ ಸ್ಥಳೀಯರಾಗಿದ್ದರೆ, ಉಳಿದವರು ಜಾರ್ಖಂಡ್, ಒಡಿಶಾ ಮತ್ತು ಉತ್ತರಪ್ರದೇಶದವರು ಎಂದು ಮೂಲಗಳು ತಿಳಿಸಿವೆ.