ಬೆಂಗಳೂರು, ಫೆಬ್ರವರಿ 24. 2025: ಗ್ಯಾಲರಿ ಜಿ, ದ ಮಾಸ್ಟರ್ಸ್ & ದ ಮಾಡರ್ನ್: ಸೌತ್ ಎಡಿಷನ್ ಎಂಬ ಚಿತ್ರಕಲಾ ಪ್ರದರ್ಶನವನ್ನು ಬೆಂಗಳೂರಿನಲ್ಲಿ ಆಯೋಜಿಸಿದೆ. ಈ ಪ್ರದರ್ಶನವು ದಕ್ಷಿಣ ಭಾರತದ ಕಲೆಯ ಐತಿಹ್ಯ ಹಾಗೂ ಪ್ರಗತಿಯನ್ನು ಉತ್ಸವದ ರೂಪದಲ್ಲಿ ಆಚರಿಸಲಿದೆ. ಕಲಾ ಪ್ರದರ್ಶನ ಫೆಬ್ರವರಿ 26ರಿಂದ ಮಾರ್ಚ್ 31ರವರೆಗೆ ನಡೆಯಲಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.
ತಮಿಳುನಾಡು, ಕರ್ನಾಟಕ, ಕೇರಳ ಮತ್ತು ಆಂಧ್ರಪ್ರದೇಶ ಮತ್ತು ತೆಲಂಗಾಣದ ಕಲಾಕೃತಿಗಳು ಇಲ್ಲಿ ಪ್ರದರ್ಶನಗೊಳ್ಳಲಿವೆ. ದಕ್ಷಿಣ ಭಾರತದ ಕಲಾವಿದರು ಕಾಲಕ್ರಮೇಣ ತಮ್ಮ ಶೈಲಿಯನ್ನು ಹೇಗೆ ಅಭಿವೃದ್ಧಿಪಡಿಸಿದರು ಮತ್ತು ಸ್ಥಳೀಯ ಸಂಪ್ರದಾಯಗಳು, ಪುರಾಣಕಥೆಗಳ ಜತೆಗೆ ಜಾಗತಿಕ ಕಲಾಕ್ಷೇತ್ರದ ಪ್ರಭಾವಗಳೊಂದಿಗೆ ಗಾಢ ನಂಟನ್ನು ಹೇಗೆ ಹೊಂದಿದ್ದಾರೆ ಎಂಬುದನ್ನು ಈ ಪ್ರದರ್ಶನದಲ್ಲಿ ಅರಿಯಬಹುದು.
ತಂಜಾವೂರ್ ಮತ್ತು ಮೈಸೂರು ಶೈಲಿಯ ನವೀನ ಕಲಾಕೃತಿಗಳನ್ನು ಈ ಪ್ರದರ್ಶನದಲ್ಲಿ ವೀಕ್ಷಿಸಬಹುದು. ಇವು ತಮ್ಮ ವಿಶಿಷ್ಟ ವಿನ್ಯಾಸಗಳು ಮತ್ತು ಚಿನ್ನದ ಕಸೂತಿಗಳಿಗಾಗಿ ಸುಪ್ರಸಿದ್ಧ. ಈ ಪ್ರದರ್ಶನವು ದೇವಾಲಯ ಶಿಲ್ಪಗಳಿಂದ ಪ್ರಭಾವಿತವಾದ ಆಧುನಿಕ ಕೃತಿಗಳನ್ನು ಹಾಗೂ 20ನೇ ಶತಮಾನದ ಪ್ರಾರಂಭದ ಯುರೋಪಿಯನ್ ತಂತ್ರಗಳನ್ನು ಒಳಗೊಂಡಿದೆ. ಮದ್ರಾಸ್ ಆರ್ಟ್ ಮೂವ್ಮೆಂಟ್‌ನ ಕಲಾವಿದರು ವೀಕ್ಷಕರ ಗಮನ ಸೆಳೆಯಲಿದ್ದಾರೆ.
ಕೆಎಂ ಅಡಿಮೂಲಂ, ಕೆ.ಕೆ ಹೆಬ್ಬಾರ್, ಎಸ್.ಜಿ ವಾಸುದೇವ್ ಅವರಂತಹ ದಕ್ಷಿಣ ಭಾರತದ ಖ್ಯಾತ ಕಲಾವಿದರ ಕಲಾಕೃತಿಗಳು ಇಲ್ಲಿ ಪ್ರದರ್ಶನಗೊಳ್ಳಲಿವೆ. ಇವರೆಲ್ಲರೂ ಸ್ಥಳೀಯ ಸಂಪ್ರದಾಯಗಳನ್ನು ಸಮಕಾಲೀನ ವಿಷಯಗಳೊಂದಿಗೆ ಸಮ್ಮಿಲನಗೊಳಿಸಿ ಒಂದು ವಿಶಿಷ್ಟ ಮತ್ತು ಪ್ರಭಾವಶೀಲ ಕಲಾ ಭಾಷೆಯನ್ನು ಸೃಷ್ಟಿಸಿದವರು.

ಜನಪ್ರಿಯ ಕಲಾವಿದರ ಜತೆಗೆ, ಡಿಜಿಟಲ್ ಕಲೆ ಮತ್ತು ಹೊಸ ಮಾಧ್ಯಮವನ್ನು ಬಳಸುವ ಉದಯೋನ್ಮುಖ ಕಲಾವಿದರು ಭಾಗಿಯಾಗಲಿದ್ದಾರೆ. ಅವರು, ಅಸ್ಮಿತೆ, ಸಾಮಾಜಿಕ ಸಮಸ್ಯೆಗಳು ಮತ್ತು ಪರಿಸರದಂತಹ ಆಧುನಿಕ ವಿಷಯಗಳನ್ನು ಅನ್ವೇಷಿಸಿದವರು.
ಜಿತೇಶ್ ಕಲಾತ್, ಅವಿನಾಶ್ ವೀರರಾಘವನ್, ಗುರುದಾಸ್ ಶೆಣೊಯ್ ಮತ್ತು ಬಾರಾ ಭಾಸ್ಕರನ್ ಮುಂತಾದ ಪ್ರಸಿದ್ಧ ಕಲಾವಿದರ ಇನ್ನೂ ಪ್ರದರ್ಶನಗೊಳ್ಳದ ಕೆಲವು ಕೃತಿಗಳನ್ನು ಮೊದಲ ಬಾರಿಗೆ ಪ್ರದರ್ಶಿಸಲಿದ್ದಾರೆ. ಉದಯೋನ್ಮುಖ ದಕ್ಷಿಣ ಭಾರತೀಯ ಕಲಾವಿದರಾದ ಕೆಪಿ ಲಿಯೋನ್, ಹಿಮಾ ಹರಿಹರನ್ ಮತ್ತು ಆನಂದ್ ಬೆಕ್ವಾಡ್ ಅವರ ಕಲೆಯೂ ಪ್ರಸ್ತುತಗೊಳ್ಳಲಿದೆ.
ದ ಮಾಸ್ಟರ್ಸ್ & ದ ಮಾಡರ್ನ್: ಸೌತ್ ಎಡಿಷನ್ ಹಳೆಯ ಮತ್ತು ಹೊಸತನ ನಡುವೆ ನಡೆದ ಭಾವನಾತ್ಮಕ ಸಂಭಾಷಣೆಯಾಗಿದೆ. ಪ್ರತಿಯೊಂದು ಕಲಾಕೃತಿಯೂ ಈ ಪ್ರದೇಶದ ಕಲಾತ್ಮಕ ಪರಂಪರೆಗೆ ವಸಾಕ್ಷಿಯಾಗುತ್ತವೆ.
ಪ್ರದರ್ಶನದ ವಿವರ
ದಿನಾಂಕ : 26 ಫೆಬ್ರವರಿ – 31 ಮಾರ್ಚ್, 2025
ಸ್ಥಳ: ಗ್ಯಾಲರಿ G, 38 ಮೈನೀ ಸದನ್, 7ನೇ ಕ್ರಾಸ್ ಲ್ಯಾವೆಲ್ಲೆ ರೋಡ್, ಬೆಂಗಳೂರು 560001.
ಪ್ರವೇಶ: ಉಚಿತ



















